ವಿಪಕ್ಷ ನಾಯಕ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು : ವಿಜಯೇಂದ್ರ
ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಮಂಗಳವಾರ ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿಯವರ ನೇತೃತ್ವದ ಬಿಜೆಪಿ ಈ ದೇಶವನ್ನು ಮುನ್ನಡೆಸುತ್ತಿದೆ. ಮತ್ತೊಂದು ಕಡೆ ಸತತ 3 ಬಾರಿ ಹೇಗಾದರೂ ಮಾಡಿ ಅಧಿಕಾರಕ್ಕೆ ತರಲು ಪ್ರಯತ್ನಿಸಿದ ರಾಹುಲ್ ಗಾಂಧಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ವಿಪಕ್ಷ ನಾಯಕನ ಸ್ಥಾನ ಜವಾಬ್ದಾರಿ ಅವರಿಗೆ ಮೊದಲ ಬಾರಿಗೆ ಲಭಿಸಿದೆ. ನಿನ್ನೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿ ಮಾಡಿದ ಚೊಚ್ಚಲ ಭಾಷಣ ಸುಳ್ಳು, ನಿರಾಶೆ, ಆಧಾರರಹಿತ ಆರೋಪಗಳಿಂದ ಕೂಡಿತ್ತು ಎಂದು ಆಕ್ಷೇಪಿಸಿದರು.
ಸದನದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಸಂಸತ್ತಿನ ನಿಯಮಗಳಿಗೆ ಧಕ್ಕೆ ತರುವಂತಿತ್ತು. ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಸುಳ್ಳನ್ನೇ ಹತ್ತಾರು ಬಾರಿ ಹೇಳಿಕೊಂಡು ದೇಶಾದ್ಯಂತ ಪ್ರವಾಸ ಮಾಡಿದ್ದರು. ಈಗ ವಿಪಕ್ಷ ನಾಯಕನಾಗಿ ಹಳೇ ಚಾಳಿ ಮುಂದುವರೆಸಿದ್ದಾರೆ; ಸಂಸದರೂ ಆದ ಅವರು ತಮ್ಮ ಸ್ಥಾನದ ಘನತೆ ಎತ್ತಿ ಹಿಡಿಯುವ ಬದಲಾಗಿ ಆ ಸ್ಥಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ತೇಜೋವಧೆ: ತೇಜೋವಧೆ ಮಾಡಲು ಸದನವನ್ನು ಬಳಸಿದ ರಾಹುಲ್ ಗಾಂಧಿಯವರು, ಸಿಖ್ ಹತ್ಯಾಕಾಂಡಕ್ಕೆ ಕಾರಣಕರ್ತರು ಯಾರು? ಕಾಂಗ್ರೆಸ್ ಮುಖಂಡರಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಹೇಳಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿ ದೇಶದ ಮುಗ್ಧ ಜನರ ಮೇಲೆ ದಬ್ಬಾಳಿಕೆ ಮಾಡಿದ್ದು ಇದೇ ಕಾಂಗ್ರೆಸ್ ಪಕ್ಷ ಎಂಬುದನ್ನೂ ಅವರು ಗಮನಿಸಿ ಉತ್ತರ ಕೊಡಲಿ ಎಂದು ಆಗ್ರಹಿಸಿದರು.