ಪರಿಶಿಷ್ಟರ ಮೀಸಲಾತಿ ವರ್ಗೀಕರಣ | ಹೊಸದಾಗಿ ಸಮೀಕ್ಷೆ ಕೈಗೊಳ್ಳಬೇಕು : ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಬೆಂಗಳೂರು: ಪರಿಶಿಷ್ಟರ ಮೀಸಲಾತಿ ವರ್ಗಿಕರಣಕ್ಕೆ ಮೊದಲು ‘ಸಮುದಾಯಗಳ ಅಂತರ್ ಹಿಂದುಳಿದಿರುವಿಕೆ ಪತ್ತೆ ಹಚ್ಚಬೇಕು. ವಾಸ್ತವಿಕ ದತ್ತಾಂಶಗಳ ಮೂಲಕ ಮಾತ್ರ ವರ್ಗಿಕರಿಸಲು ಸಾಧ್ಯ’ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಹೀಗಾಗಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವು ಹೊಸದಾಗಿ ಸಮಗ್ರ ಸಮೀಕ್ಷೆ ಕೈಗೊಳ್ಳಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮನವಿ ಮಾಡಿದ್ದಾರೆ.
ಮಂಗಳವಾರ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಭೋವಿ ಸಮುದಾಯದ ಮುಖಂಡರು, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ‘ಈಗಾಗಲೇ ಕೇಂದ್ರ ಸರಕಾರ ಪ್ರಾರಂಭಿಸಿರುವ ರಾಷ್ಟ್ರೀಯ ಜನಗಣತಿಯು ಪೂರ್ಣಗೊಂಡು ಸಿಗುವ ಮಾಹಿತಿ ಗಳಿಗಾಗಿ ಕಾಯಬೇಕು. ಪರಿಶಿಷ್ಟರ ಎಲ್ಲ ಸಮುದಾಯಗಳ ಕುಲಶಾಸ್ತ್ರ ಆಧ್ಯಯನ ನಡೆಸಬೇಕು. ಆಯೋಗವು ಸಾರ್ವಜನಿಕ ಅಹವಾಲು ಸ್ವೀಕರಿಸಲು ನಿಗದಿ ಗೊಳಿಸಿರುವ ದಿನಾಂಕವನ್ನು ಇನ್ನೂ ಕನಿಷ್ಟ 3 ತಿಂಗಳುಗಳಿಗೆ ವಿಸ್ತರಿಸಬೇಕು. ಆಯೋಗ ಎಲ್ಲ ಜಿಲ್ಲಾ ಪ್ರವಾಸ ಮಾಡಿ ಅಹವಾಲು ಸ್ವೀಕಾರ, ಅಧ್ಯಯನ ನಡೆಸಬೇಕು ಎಂದು ಕೋರಿದರು.
ಸುಪ್ರೀಂ ಕೋರ್ಟ್ ಹೇಳಿರುವಂತೆ Empirical data ನಿಖರವಾಗಿ ಯಾವುದೇ ಎಂಬುದು ಸ್ಪಷ್ಟಪಡಿಸಲು ಕೋರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಬೇಕು. ಈ ಸಮುದಾಯಗಳ ಸ್ಥಿತಿಗತಿಗಳ ಅಂಕಿ-ಅಂಶಗಳು ಹೊರಬರುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಅಲ್ಲಿಯವರೆಗೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಅವರುಗಳು ಆಗ್ರಹಿಸಿದರು.
ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದ ಮಲ್ಲೇಶ ಬಾಬು, ಚಿತ್ರದುರ್ಗ ಆನಂದಪ್ಪ, ಹಾವೇರಿ ರವಿ ಪೂಜಾರ, ಮುನಿಮಾರಪ್ಪ, ಜಯರಾಮ, ನಿವೃತ್ತ ನ್ಯಾಯಧೀಶ ವೆಂಕಟೇಶ, ಲಯನ್ ಶ್ರೀಧರ, ಜಯಶಂಕರ, ತುಮಕೂರು ಓಂಕಾರ, ಪುರುಷೋತ್ತಮ, ಕಾಶಿ, ಗೀತಮ್ಮ, ಮಂಜುಳಮ್ಮ, ಡಾ. ನಿರ್ಮಲಮ್ಮ, ದೀಪಾ, ಚಿಕ್ಕಮಗಳೂರು ಚಂದ್ರಶೇಖರ ಉಪಸ್ಥಿತರಿದ್ದರು.







