ಗುರುಪ್ರಸಾದ್ ಕಂಟಲಗೆರೆ ಸೇರಿ ಮೂವರಿಗೆ ‘ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ’

ಸಾಂದರ್ಭಿಕ ಚಿತ್ರ
ಬೆಂಗಳೂರು : 2024ನೇ ಸಾಲಿನ ರಾಜ್ಯಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಗೆ ಗುರುಪ್ರಸಾದ್ ಕಂಟಲಗೆರೆ ಅವರ ಅಟ್ರಾಸಿಟಿ ಕಾದಂಬರಿ, ಲಕ್ಷ್ಮಣ ಶರೆಗಾರ ಅವರ ತಿಥಿಯ ತುದಿಗೆ ಬೆಂಕಿಯ ಉಗುಳು ಕಥಾಸಂಕಲನ, ಶಶಿ ತರಿಕೆರೆ ಅವರ ಪ್ಯೂಪಾ ಕವನ ಸಂಕಲನ ಕೃತಿಗಳು ಆಯ್ಕೆಯಾಗಿವೆ ಎಂದು ಮಲ್ಲಿಕಾರ್ಜುನ ಶೆಲ್ಲಿಕೇರಿ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಬಾಗಲಕೋಟೆಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದ ವತಿಯಿಂದ ಕಥಾಸಂಕಲನ, ಕಾದಂಬರಿ ಮತ್ತು ಕವನಸಂಕಲನ ವಿಭಾಗಗಳಲ್ಲಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಈ ಮೂರು ಸಾಹಿತ್ಯ ಪ್ರಕಾರಗಳಲ್ಲಿ ಒಟ್ಟು 111 ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಹಿರಿಯ ವಿಮರ್ಶಕರಾದ ಎಸ್.ಆರ್.ವಿಜಯಶಂಕರ್, ಡಾ.ಎಂ.ಎಸ್.ಆಶಾದೇವಿ ಮತ್ತು ಡಾ.ವಿಕ್ರಮ ವಿಸಾಜಿ ಅವರು ಪ್ರಶಸ್ತಿಯ ತೀರ್ಪುಗಾರರಾಗಿದ್ದರು ಎಂದು ತಿಳಿಸಿದ್ದಾರೆ.
ಈ ಮೂವರು ಪ್ರಶಸ್ತಿ ವಿಜೇತರಿಗೆ ತಲಾ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಫೆ. 23ರಂದು ಬಾಗಲಕೋಟೆಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಭವನದಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ. ಪ್ರಶಸ್ತಿಪ್ರದಾನ ಸಮಾರಂಭಕ್ಕೆ ಕತೆಗಾರರಾದ ಶ್ರೀಧರ ಬಳಗಾರ, ಕೇಶವ ಮಳಗಿ, ಜಿಲ್ಲಾಧಿಕಾರಿ ಜಾನಕಿ.ಕೆ.ಎಂ., ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.





