ಎಚ್.ಎಸ್.ರಾಘವೇಂದ್ರ ರಾವ್ ಸೇರಿ ಮೂವರಿಗೆ ‘ಶೂದ್ರ ಶ್ರೀನಿವಾಸ್ ಪ್ರತಿಷ್ಠಾನ ಪ್ರಶಸ್ತಿ’

ಸಾಂದರ್ಭಿಕ ಚಿತ್ರ
ಬೆಂಗಳೂರು : ‘ಶೂದ್ರ ಶ್ರೀನಿವಾಸ್ ನೆಲದಮಾತು ಪ್ರತಿಷ್ಠಾನ’ವು 2024ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ʼಕಿ.ರಂ. ನಾಗರಾಜ ಮತ್ತು ಡಾ.ಸಿದ್ಧಲಿಂಗಯ್ಯ ಸಮಗ್ರ ಸಾಹಿತ್ಯ ಪ್ರಶಸ್ತಿʼಗೆ ಡಾ.ಎಚ್.ಎಸ್. ರಾಘವೇಂದ್ರರಾವ್, ʼಡಾ.ಕೆ. ಮರುಳಸಿದ್ದಪ್ಪ ರಂಗಭೂಮಿ ಪ್ರಶಸ್ತಿʼಗೆ ಬಿ.ಜಯಶ್ರೀ, ʼಕೋಟೆ ನಂಜಪ್ಪರೆಡ್ಡಿ ಪ್ರಗತಿಪರ ರೈತ ಪ್ರಶಸ್ತಿʼಗೆ ಕೋಲಾರ ಜಿಲ್ಲೆಯ ದೊಡ್ಡ ಅಸಾಳ ಗ್ರಾಮದ ನಾರಾಯಣಪ್ಪ ಭಾಜನರಾಗಿದ್ದಾರೆ.
ಪ್ರಶಸ್ತಿಯು ತಲಾ 25ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಡಾ.ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿಯು ಡಾ.ಚಿದಾನಂದಸಾಲಿ ಅವರ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ' ಕವನ ಸಂಕಲನಕ್ಕೆ ಲಭಿಸಿದ್ದು ಪ್ರಶಸ್ತಿಯ ಮೊತ್ತ 15ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನೊಳಗೊಂಡಿದೆ.
ಈ ಪ್ರಶಸ್ತಿಗಳನ್ನು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ಅಧ್ಯಕ್ಷತೆಯಲ್ಲಿ ಮಾರ್ಚ್ 2ರಂದು ನಡೆಯಲಿರುವ ಸಮಾರಂಭದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಕೆ.ಸಿ.ರಾಮಮೂರ್ತಿ ಅವರು ಪ್ರಧಾನ ಮಾಡಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಎಚ್.ದಂಡಪ್ಪ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





