ನಾಲ್ವರಿಗೆ ಚಾಕು ಇರಿತ ಪ್ರಕರಣ: ರೌಡಿಶೀಟರ್ ಬಂಧನ

ಬೆಂಗಳೂರು: ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರಿಗೆ ಚಾಕು ಇರಿದಿದ್ದ ಆರೋಪದಡಿ ರೌಡಿಶೀಟರ್ ಕದಂಬನನ್ನು ಬಂಧಿಸಿ, 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಫೆ.8ರಂದು ಇಂದಿರಾನಗರ 3ನೆ ಅಡ್ಡರಸ್ತೆಯಲ್ಲಿ ರೌಡಿಶೀಟರ್ ಕದಂಬ ಎಂಬಾತ 20 ನಿಮಿಷಗಳ ಅಂತರದಲ್ಲಿ ಜಸ್ವಂತ್, ತಮ್ಮಯ್ಯ, ಮಹೇಶ್ ಸೀತಾಪತಿ ಹಾಗೂ ದೀಪಕ್ ಕುಮಾರ್ ಎಂಬವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊಸಕೋಟೆಯಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ.
ಇನ್ನೂ, ಈ ಪ್ರಕರಣದಲ್ಲಿ ಪರಾರಿಯಾಗಲು ಸಹಕರಿಸಿದ್ದ ತಂದೆ ಸುರೇಶ್, ಸಹೋದರ ವಿಷ್ಣು ಹಾಗೂ ಅಕ್ಕ ಸುಶ್ಮಿತಾ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಓರ್ವನನ್ನು ಹೊರತುಪಡಿಸಿ ಉಳಿದವರಿಗೆ ನಿಖರವಾಗಿ ಇಂತಹದ್ದೇ ಕಾರಣಕ್ಕೆ ಚಾಕು ಇರಿದೆ ಎಂಬುದನ್ನು ಹೇಳಿಲ್ಲ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
Next Story





