ಬೆಂಗಳೂರು | ‘ವಕ್ಫ್ ತಿದ್ದುಪಡಿ ಮಸೂದೆ’ ಖಂಡಿಸಿ ಪ್ರತಿಭಟನೆ

ಬೆಂಗಳೂರು : ಕೇಂದ್ರ ಸರಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆ ಖಂಡಿಸಿ, ಮಂಗಳೂರು ಮುಸ್ಲಿಂ ಯೂಥ್ ಕೌನ್ಸಿಲ್, ಕರ್ನಾಟಕ ಬ್ಯಾರಿ ಮತ್ತು ಮುಸ್ಲಿಂ ಸಂಘಟನೆಗಳ ಸಹಯೋಗದೊಂದಿಗೆ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಅಂಕಣಕಾರ ಶಿವಸುಂದರ್, ಎಲ್ಲರಿಗೂ ಅನ್ಯಾಯ ಮಾಡುತ್ತಿರುವುದು ಒಬ್ಬರೇ ಆಗಿದ್ದಾರೆ. ವಕ್ಫ್ ಮೂಲಕ ಮುಸ್ಲಿಮರಿಗೆ ಮಾತ್ರ ಮಾಡುತ್ತಿರುವ ಅನ್ಯಾಯವಲ್ಲ. ಒಂದೊಂದೇ ಅಲ್ಪಸಂಖ್ಯಾತರನ್ನು, ದುರ್ಬಲರನ್ನು ಬಿಡಿಯಾಗಿಸಿ, ಅವರ ಅಸ್ತಿತ್ವವನ್ನು ನಾಶಮಾಡುವ ಹುನ್ನಾರದ ಭಾಗವಾಗಿದೆ ಎಂದು ಎಚ್ಚರಿಸಿದರು.
ವಕ್ಫ್ ಬಗ್ಗೆ ಬಿಜೆಪಿಯವರು ಅನೇಕ ಸುಳ್ಳುಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಮುಸ್ಲಿಮರನ್ನು ದಾಳಿಕೋರರು ಎನ್ನವ ಭಾವನೆಯನ್ನು ಬಿತ್ತಿದ್ದಾರೆ. ಆದ್ದರಿಂದ ಮೊದಲು ವಕ್ಫ್ ಎಂದರೇನು? ಎನ್ನುವುದನ್ನು ಎಲ್ಲರಿಗೂ ಅರಿವು ಮೂಡಿಸಬೇಕಿದೆ. ಅನೇಕ ಉದಾತ್ತ ಆಶಯಗಳನ್ನು ಇಟ್ಟುಕೊಂಡು ವಕ್ಫ್ ಎನ್ನುವ ಪದ್ಧತಿ ಬಂದಿದೆ. ಸಾವಿರ ವರ್ಷಗಳಿಂದ ಹಲವು ಜನರು ತಮ್ಮ ಆಸ್ತಿಗಳನ್ನು ವಕ್ಫ್ ಬಿಡುತ್ತಿದ್ದಾರೆ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲಿ ಹಿಂದೂ ದೊರೆಗಳು, ಶ್ರೀಮಂತ ಹಿಂದೂಗಳೂ ಕೂಡ ಕೊಟ್ಟಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜದ ಒಳಿತಿಗಾಗಿ ದಾನ ಕೊಡುವ ಪದ್ಧತಿ ನಮ್ಮ ದೇಶದಲ್ಲಿ ಇದೆ. ಅದರ ದುರುಪಯೋಗ ಆಗದಂತೆ ನಿರ್ವಹಣೆ ಮಾಡಲು ಬ್ರಿಟೀಷರು 1913ರಲ್ಲಿ ವಕ್ಫ್ ಕಾಯ್ದೆ ಜಾರಿಗೆ ತಂದರು ಎಂದು ಮಾಹಿತಿ ನೀಡಿದರು.
ವಕ್ಫ್‌ಗೆ ಅನೇಕ ತಿದ್ದುಪಡಿಗಳಾಗಿವೆ. ಆದರೆ 2024ರಲ್ಲಿ ನರೇಂದ್ರ ಮೋದಿ ಜಾರಿಗೆ ತಂದ ‘ಉಮೀದ್’ (ಯುನೈಟೆಡ್ ವಕ್ಫ್ ಮ್ಯಾನೇಜ್‍ಮೆಂಟ್ ಎಂಪವರ್ಮೆಂಟ್ ಎಪಿಸಿಎನ್ಸಿ ಆಂಡ್ ಡವಲಲ್ಮೆಂಟ್) ಈ ಹೆಸರಿನಲ್ಲಿ ಎಲ್ಲವನ್ನೂ ಸರ್ವನಾಶ ಮಾಡುವ ಸಾರಾಂಶವನ್ನು ಕಾಯ್ದೆಯಲ್ಲಿ ಇಡಲಾಗಿದೆ ಎಂದು ತಿಳಿಸಿದರು.
ಮುಸ್ಲಿಂ ಆಸ್ತಿಗಳ ಕುರಿತು ತಗಾದೆಗಳು ಬಂದರೆ ಅದನ್ನು ಇತ್ಯರ್ಥ ಪಡಿಸಲು ವಕ್ಫ್ ಟ್ರಿಬ್ಯುನಲ್ ರಚನೆ ಮಾಡಲಾಯಿತು. ವಕ್ಫ್ ಟ್ರಿಬ್ಯುನಲ್ ತೀರ್ಮಾನವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಲು ಆಗುವುದಿಲ್ಲ. ಆದರೆ ಹೈಕೋರ್ಟ್‍ನಲ್ಲಿ ಪ್ರಶ್ನಿಸಬಹುದು. ಆದರೆ ಇದರ ಬಗ್ಗೆ ಬಿಜೆಪಿಯವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಡಿಸಿಪಿ ಜಿ.ಎ.ಬಾವ ಮಾತನಾಡಿ, ಕೇಂದ್ರ ಬಿಜೆಪಿಯವರು ಹೇಗಾದರೂ ಮಾಡಿ ಸಂವಿಧಾನ ತೆಗೆಯಬೇಕೆಂದು ವಕಫ್ ನಂತಹ ಕಾಯ್ದೆಗಳಿಗೆ ತಿದ್ದುಪಡಿ ಮಾಡುತ್ತಿದ್ದಾರೆ. ಬೇರೆ ಬೇರೆ ಸಮುದಾಯಗಳ ಕಾಯ್ದೆಗಳಿಗೆ ಸಮಾನಾಂತರವಾಗಿ ವಕ್ಫ್ ಕಾಯ್ದೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ, ಸಾಮಾಜಿಕ ಕಾರ್ಯಕರ್ತ ಹ್ಯಾರೀಸ್ ಸಿದ್ದೀಕ್, ಮುಹಮ್ಮದ್ ಅಲಿ ತುರ್ಕಳಿಕೆ, ಮಂಗಳೂರು ಮುಸ್ಲಿಂ ಯೂಥ್ ಕೌನ್ಸಿಲ್‍ನ ಗೌರವಾಧ್ಯಕ್ಷ ಉಮರ್ ಹಾಜಿ ಅಧ್ಯಕ್ಷ ಅಬೂಬಕ್ಕರ್, ಕೊಪ್ಪಳ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಹೀಂ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.







