ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಡಿ.ಕೆ.ಸುರೇಶ್; ಕುತೂಹಲ ಮೂಡಿಸಿದ ಬೆಳವಣಿಗೆ

ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶುಕ್ರವಾರ ಇಲ್ಲಿನ ಶಿವಾನಂದ ವೃತ್ತದ ಸಮೀಪದಲ್ಲಿ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಡಿ.ಕೆ.ಸುರೇಶ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ’ ಸಂಬಂಧ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು.
ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಡಿ.ಕೆ.ಸುರೇಶ್, ‘ರಾಮನಗರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದೆ. ನಾನು ಅವರ ಮನೆಗೆ ಆಗಾಗ ಬರುತ್ತಿರುತ್ತೇನೆ. ಇದರಲ್ಲಿ ಹೊಸದೇನು ಇಲ್ಲ. ಈ ಭೇಟಿ ನನ್ನ ವೈಯಕ್ತಿಕ ಅಷ್ಟೇ’ ಎಂದು ಸ್ಪಷ್ಟಣೆ ನೀಡಿದರು.
‘ಸಾಮಾನ್ಯವಾಗಿ ಡಿ.ಕೆ.ಸುರೇಶ್ ನಮ್ಮ ಮನೆಗೆ ಆಗಾಗ ಬರುತ್ತಿರುತ್ತಾರೆ. ಅವರ ಭೇಟಿಯಲ್ಲಿ ವಿಶೇಷವೇನು ಇಲ್ಲ. ಎಲ್ಲರು ಬರುವಂತೆ ಅವರು ಬಂದು ನನ್ನನ್ನು ಭೇಟಿ ಮಾಡಿದ್ದಾರೆ’
-ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವ







