ಕೆಪಿಎಸ್ಸಿ ವಿರುದ್ಧ ಕರವೇಯಿಂದ ‘ರಕ್ತಪತ್ರ ಚಳವಳಿ’ಗೆ ಚಾಲನೆ

ಬೆಂಗಳೂರು : 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕೆಪಿಎಸ್‍ಸಿ ನಡೆಸಿದ ಪರೀಕ್ಷೆಯಲ್ಲಿ 70ಸಾವಿರಕ್ಕೂ ಹೆಚ್ಚು ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ರವಿವಾರ ನಗರದ ಕರವೇ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ‘ರಕ್ತಪತ್ರ ಚಳವಳಿ’ಗೆ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಒಂದು ಲಕ್ಷಕ್ಕೂ ಹೆಚ್ಚು ಪತ್ರಗಳನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಕರವೇ ಕಾರ್ಯಕರ್ತರು ಬರೆಯಲಿದ್ದಾರೆ. ಈ ರಕ್ತಪತ್ರಗಳನ್ನು ನೋಡಿಯಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸು ಕರಗಿ ನ್ಯಾಯ ಒದಗಿಸುವವರು ಎಂಬ ನಂಬಿಕೆ ನಮ್ಮದು ಎಂದು ತಿಳಿಸಿದರು.
ಕೆಎಎಸ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಸಂಬಂಧಪಟ್ಟವರನ್ನು ಕರೆಸಿ ಮಾತನಾಡಿ ಪರಿಹಾರ ರೂಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ನೀಡಿದ ಭರವಸೆ ಹುಸಿಯಾಗಿದೆ. ಅವರನ್ನು ತಡೆಯುತ್ತಿರುವ, ದಾರಿ ತಪ್ಪಿಸುತ್ತಿರುವ ಶಕ್ತಿಗಳಾದರೂ ಯಾವುವು? ಎಂದು ಪ್ರಶ್ನಿಸಿದರು.
ಮಾರ್ಚ್ 3ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭವಾಗುತ್ತಿದೆ. ಪರೀಕ್ಷೆ ಬರೆದ ಕನ್ನಡ ಮಾದ್ಯಮದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಬೆಂಗಳೂರಿಗೆ ಬರುತ್ತಿದ್ದಾರೆ. ಅವರೆಲ್ಲರೂ ವಿಧಾನಸೌಧಕ್ಕೆ ಬರುತ್ತಾರೆ. ಅವರನ್ನು ಹೇಗೆ ತಡೆಯುತ್ತೀರಿ? ನ್ಯಾಯ ದೊರೆಯದಿದ್ದರೆ ವಿಷ ಕುಡಿದು ಸಾಯುವುದಾಗಿ ಅವರು ಹೇಳುತ್ತಿದ್ದಾರೆ. ಏನಾದರೂ ಅನಾಹುತ ನಡೆದರೆ ಅದು ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕಿಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಕೆಪಿಎಸ್‍ಸಿ ಪರೀಕ್ಷೆ ಬರೆದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಗಟ್ಟಿಯಾಗಿ ನಿಂತಿದೆ. ಏನೇ ಬಂದರೂ ನಾವು ಹಿಂದೆ ಸರಿಯುವುದಿಲ್ಲ. ಕೆಪಿಎಸ್‍ಸಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕರವೇ ಮುಖಂಡರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಇಂಥ ನೂರು ಪ್ರಕರಣ ದಾಖಲಿಸಿದರೂ ನಾವು ಜಗ್ಗುವುದಿಲ್ಲ. ಕನ್ನಡದ ಮಕ್ಕಳಿಗೆ ನ್ಯಾಯ ದೊರೆಯಲೇಬೇಕು ಎಂದು ಅವರು ಗುಡುಗಿದರು.







