ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉರ್ದು ಮಾಧ್ಯಮ ಶಾಲೆಗಳ ಅಭಿವೃದ್ಧಿಗಿಲ್ಲ ಯೋಜನೆಗಳು
ಅಂಜುಮನ್ ಎ ತರಖ್ಖಿ ಉರ್ದು ಸಂಘಟನೆಗೆ ಅಧ್ಯಯನ ವರದಿ ಸಲ್ಲಿಕೆ

ಬೆಂಗಳೂರು : ಅಂಜುಮನ್ ಎ ತರಖ್ಖಿ ಉರ್ದು(ಹಿಂದ್) ಕರ್ನಾಟಕ ಘಟಕವು ರಾಜ್ಯದಲ್ಲಿನ ಉರ್ದು ಮಾಧ್ಯಮ ಶಾಲೆಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಲು ನೇಮಿಸಿದ ಸಮಿತಿಯು ತಮ್ಮ ಸುದೀರ್ಘ ಎರಡು ವರ್ಷಗಳ ಅಧ್ಯಯನಗಳ ಬಳಿಕ 401 ಪುಟಗಳ ವರದಿಯನ್ನು ಸಂಸ್ಥೆಗೆ ಸಲ್ಲಿಸಿದೆ.
ನಿವೃತ್ತ ಐಎಎಸ್ ಅಧಿಕಾರಿಗಳಾದ ಅಝೀಝುಲ್ಲಾ ಬೇಗ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಮುಹಮ್ಮದ್ ಸಲಾಹುದ್ದೀನ್, ಮೀರ್ ಅನೀಸ್ ಅಹ್ಮದ್, ಅದೋನಿ ಸೈಯದ್ ಸಲೀಮ್ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎ.ಖಾಲಿದ್ ಸದಸ್ಯರಾಗಿದ್ದರು.
ಪ್ರಮುಖವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಉರ್ದು ಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳಿಲ್ಲದಿರುವುದನ್ನು ಬೊಟ್ಟು ಮಾಡಿರುವ ಸಮಿತಿಯು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ಹಂಚಿಕೆಯಾಗುವ ಅನುದಾನದ ಶೇ.15ರಷ್ಟನ್ನು ಉರ್ದು ಮಾಧ್ಯಮ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮೀಸಲಿಡಬೇಕು ಎಂದು ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಮೊಟಕು ಗೊಳಿಸುವುದನ್ನು ತಡೆಯಲು ಈಗಿರುವ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲಾ ಮಟ್ಟಕ್ಕೆ ಉನ್ನತೀಕರಿಸಬೇಕು. 7ನೇ ಮತ್ತು 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ವರ್ಗಾವಣೆ ಹೊಂದಲು ಅನುಕೂಲವಾಗುವಂತೆ ಅವರಿಗೆ ಪೂರಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಉರ್ದು ಮಾಧ್ಯಮ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಪರಿಚಯಿಸಬೇಕು. ಇಂಟರ್‌ನೆಟ್, ಕಂಪ್ಯೂಟರ್, ಪ್ರಾಜೆಕ್ಟರ್‌ಗಳು ಮತ್ತು ಇತರ ಶಿಕ್ಷಣ ಸಂಬಂಧಿತ ಸಾಫ್ಟ್‌ವೇರ್‌ಗಳೊಂದಿಗೆ ಕಲಿಕಾ ವಿಧಾನವನ್ನು ಉನ್ನತೀಕರಿಸಬೇಕು. ಉರ್ದು ಮಾಧ್ಯಮ ಶಾಲೆಗಳಲ್ಲಿನ ಖಾಲಿ ಹುದ್ದೆಗಳನ್ನು ಸರಕಾರ ಶೀಘ್ರದಲ್ಲೇ ಭರ್ತಿಮಾಡಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ವಾರ್ಷಿಕ ಬಜೆಟ್ ಸುಮಾರು 2 ಸಾವಿರ ಕೋಟಿ ರೂ. ಆಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳು, 220 ಮೌಲಾನಾ ಆಝಾದ್ ಮಾದರಿ ಶಾಲೆಗಳು ಹಾಗೂ 113 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗಾಗಿ 414.90 ಕೋಟಿ ರೂ. ಹಂಚಿಕೆಯಾಗಿದೆ. ಕರ್ನಾಟಕದಲ್ಲಿ 4,526 ಉರ್ದು ಮಾಧ್ಯಮ ಶಾಲೆಗಳಿವೆ ಮತ್ತು 3,51,684 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಎಲ್ಲ ಉರ್ದು ಮಾಧ್ಯಮ ವಿದ್ಯಾರ್ಥಿಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದವರು ಎಂಬುದನ್ನು ಸಮಿತಿಯು ಗುರುತಿಸಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಉರ್ದು ಮಾಧ್ಯಮ ಶಾಲೆಗಳಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಬೇಕು. ಉರ್ದು ಮಾಧ್ಯಮ ಶಾಲೆಗಳ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಸುಧಾರಣೆಗಾಗಿ ಶಾಶ್ವತ ಸಮಿತಿ ಅಥವಾ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಆಯ್ದ ಜಿಲ್ಲೆಗಳಲ್ಲಿ ಉರ್ದು ಭಾಷಾ ಪ್ರಯೋಗಾಲಯವನ್ನು ಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಕನ್ನಡ, ಇಂಗ್ಲಿಷ್ ಮತ್ತು ಇತರ ಮಾಧ್ಯಮಗಳಲ್ಲಿ ಉರ್ದುವನ್ನು ಒಂದು ಭಾಷೆಯಾಗಿ ಪರಿಚಯಿಸುವ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಅಳವಡಿಸಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ದ್ವಿಭಾಷಾ (ಉರ್ದು-ಇಂಗ್ಲಿಷ್)
ಮಾಧ್ಯಮವನ್ನು ಪರಿಚಯಿಸಬೇಕು. ರಾಜ್ಯ ಉರ್ದು ಅಕಾಡಮಿ, ಅಂಜುಮನ್ ಎ ತರಖ್ಖಿ ಉರ್ದು(ಹಿಂದ್) ಕರ್ನಾಟಕ ಇತರ ನಾಗರಿಕ ಸಮಾಜ ಗುಂಪುಗಳು ಉರ್ದು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಉರ್ದು ಪ್ರೇಮಿಗಳನ್ನು ಪ್ರೇರೇಪಿಸಿ, ಎಲ್ಲ ಜಿಲ್ಲೆಗಳಲ್ಲಿ ಅಂಜುಮನ್ ವತಿಯಿಂದ ಸದಸ್ಯತ್ವ ಅಭಿಯಾನ ನಡೆಸಬೇಕು. ಉರ್ದು ಭಾಷೆಯ ಪ್ರಚಾರಕ್ಕಾಗಿ, ಅಂಜುಮನ್, ಉರ್ದು ಭಾಷಾ ಪ್ರಚಾರ ರಾಷ್ಟ್ರೀಯ ಮಂಡಳಿ, ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜೊತೆ ಕಾರ್ಯನಿರ್ವಹಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಅಂಜುಮನ್ ವತಿಯಿಂದ ಉರ್ದು ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು. ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗಾಗಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯೊಂದಿಗೆ ಸಹಭಾಗಿತ್ವದಲ್ಲಿ ಜಾಗೃತಿಯ ಕಾರ್ಯಕ್ರಮಗಳನ್ನು ಅಂಜುಮನ್ ನಡೆಸಬೇಕು. ಸರಕಾರಿ ಇಲಾಖೆಗಳು ಮತ್ತು ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಧ ಸ್ಪರ್ಧಾತ್ಮಕ ಹಾಗೂ ಪ್ರವೇಶ ಪರೀಕ್ಷೆಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸಬೇಕು. ಅಲ್ಲದೇ, ಉರ್ದು ಮಾಧ್ಯಮ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಉಪಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ವಿದ್ಯಾರ್ಥಿಗಳಿಗೆ ನೆರವು ನೀಡಲು ಪರಿಹಾರಾತ್ಮಕ ತರಗತಿಗಳು, ಸಂಪರ್ಕ ಕೋರ್ಸ್‌ಗಳು, ಅಂಗನವಾಡಿಗಳು, ಪೂರ್ವ ಪ್ರಾಥಮಿಕ ಶಾಲೆಗಳು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಕಂಪ್ಯೂಟರ್ ಕಲಿಕೆ ಹಾಗೂ ಇಂಗ್ಲಿಷ್ ಮಾತನಾಡುವ ಕೋರ್ಸ್‌ಗಳನ್ನು ಆರಂಭಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ವರದಿ ಸಿದ್ಧಪಡಿಸಿದ್ದು ಹೇಗೆ?
ಬೆಂಗಳೂರು ನಗರ, ಬೀದರ್, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ ಸಮಿತಿಯು, 65 ಶಾಲೆಗಳಿಗೆ ಭೇಟಿ, 98 ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿ ಹಾಗೂ ಪೋಷಕರ ಸಭೆಗಳಲ್ಲಿ ಪಾಲ್ಗೊಂಡಿತು. ರಾಜ್ಯ ಮಟ್ಟದ ಆರು ಸಂಘ ಸಂಸ್ಥೆಗೊಂದಿಗೆ ಸಮಾಲೋಚನೆ ನಡೆಸಿ, 33 ಶಾಲೆಗಳಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, 647 ಪೋಷಕರ ಸಂದರ್ಶನ ನಡೆಸಿ ಒಟ್ಟು 401 ಪುಟಗಳ ವರದಿಯನ್ನು ಸಿದ್ಧಪಡಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಅಝೀಝುಲ್ಲಾ ಬೇಗ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಮುಹಮ್ಮದ್ ಸಲಾಹುದ್ದೀನ್, ಮೀರ್ ಅನೀಸ್ ಅಹ್ಮದ್, ಅದೋನಿ ಸೈಯದ್ ಸಲೀಮ್ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎ.ಖಾಲಿದ್ ಸದಸ್ಯರಾಗಿದ್ದರು. ಎರಡು ವರ್ಷಗಳ ಅಧ್ಯಯನದ ಬಳಿಕ ಬಹಳ ಉತ್ತಮವಾದ ವರದಿಯನ್ನು ನೀಡಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಉರ್ದು ಮಾಧ್ಯಮ ಶಾಲೆಗಳ ಕುರಿತು ಬಂದಿರುವ ಮೊದಲ ಅಧ್ಯಯನ ವರದಿ ಇದಾಗಿದೆ. ಈ ವರದಿಯ ಕುರಿತು ನಮ್ಮ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ಮಾಡಿ, ಆನಂತರ ಎಲ್ಲ ಪಕ್ಷಗಳ ರಾಜಕೀಯ ಮುಖಂಡರ ಜೊತೆ ಸಮಾಲೋಚನೆ ಮಾಡುತ್ತೇವೆ. ಬಳಿಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ವರದಿ ಹಾಗೂ ಶಿಫಾರಸುಗಳನ್ನು ಸಲ್ಲಿಸುತ್ತೇವೆ.
-ಮುಹಮ್ಮದ್ ಉಬೇದುಲ್ಲಾ ಶರೀಫ್,
ಅಂಜುಮನ್ ಎ ತರಖ್ಖಿ ಉರ್ದು(ಹಿಂದ್) ಕರ್ನಾಟಕದ ಅಧ್ಯಕ್ಷ