ಸಿದ್ದರಾಮಯ್ಯರ ದಲಿತಪರ ಕಾಳಜಿ ಎಲ್ಲಿ? : ವಿಜಯೇಂದ್ರ

ಬೆಂಗಳೂರು : ‘ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಲಿತಪರ ಕಾಳಜಿ ಎಲ್ಲಿ ಹೋಗಿದೆ?, ವಿಪಕ್ಷದಲ್ಲಿದ್ದಾಗ ಇದ್ದ ದಲಿತಪರ ಕಾಳಜಿ ಅಧಿಕಾರಕ್ಕೆ ಬಂದ ಬಳಿಕ ಮರೆತುಹೋಯಿತೇ?’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಗುರುವಾರ ಪರಿಶಿಷ್ಟರ ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಹಿಂದ ಹೆಸರಿನೊಂದಿಗೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಣ್ಣೀರು ಒರೆಸುವುದಾಗಿ ಹೇಳಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದವರು. ಅವರು ಅನುಭವಿ ಮುಖ್ಯಮಂತ್ರಿ, ಅವರನ್ನು ಅಸಮರ್ಥ ಎನ್ನುವುದಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಹಾಯಕರಾಗಿದ್ದಾರಾ? ಎಂದು ಪ್ರಶ್ನಿಸಿದರು..
ದಲಿತ ಸಮುದಾಯಕ್ಕೆ ಶಕ್ತಿ ಕೊಡಬೇಕಾದ ಹಣದ ದುರ್ಬಳಕೆ ಮಾಡಿದ್ದೀರಲ್ಲ? ಇದು ನ್ಯಾಯವೇ? ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಿಮ್ಮಂತೆ ಪೊಳ್ಳು ಭರವಸೆ ಕೊಡಲಿಲ್ಲ. ನಮ್ಮ ಸರಕಾರಗಳು ದಲಿತರ ಕಾಲನಿಗಳಿಗೆ ಮೂಲಸೌಕರ್ಯಗಳನ್ನು ಕೊಟ್ಟಿದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಎಸ್‍ಸಿಎಪಿ, ಟಿಎಸ್‍ಪಿ ಹಣವನ್ನು ದುರ್ಬಳಕೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕದಿರಿ. ದಲಿತರ ಕಣ್ಣಲ್ಲಿ ನೀರು ಬಂದರೆ ಆ ಶಾಪ ನಿಮ್ಮ ಸರಕಾರಕ್ಕೆ ತಟ್ಟದೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ತುಳಿತಕ್ಕೆ ಒಳಗಾದ ಪರಿಶಿಷ್ಟ ಸಮುದಾಯದವರಿಗಾಗಿ ಇರುವ ಎಸ್‍ಸಿಎಸ್‍ಪಿ- ಟಿಎಸ್‍ಪಿ ಅನುದಾನವನ್ನು ದಲಿತರನ್ನು ವಿದ್ಯಾವಂತರನ್ನಾಗಿ ಮಾಡುವುದು, ಜಮೀನು ಖರೀದಿಸಿ ಕೊಡುವುದು, ಭೂಮಿಗೆ ಕೊಳವೆ ಬಾವಿ ಹಾಕಿಸಿ ನೀರು ಕೊಡುವುದು, ಕೈಗಾರಿಕೆ ಸ್ಥಾಪನೆಗೆ ನೆರವಿನಂಥ ಆಸ್ತಿ ನಿರ್ಮಾಣಕ್ಕೆ ಹಣ ಕೊಡುವ ಯೋಜನೆಯಾಗಿದೆ. ಅದರ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಮೋಸ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಿಪಬ್ಲಿಕ್ ಪಾರ್ಟಿಯ ಮುಖಂಡ ಡಾ.ಎಂ.ವೆಂಕಟಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಮಾಜಿ ಶಾಸಕ ಸಂಪಂಗಿ, ಹರಿರಾಮ್, ಜಗನ್ನಾಥ್, ಚಿ.ನಾ.ರಾಮು, ಲಯನ್ ಬಾಲಕೃಷ್ಣ, ಸತೀಶ್, ಪಿ.ಮೂರ್ತಿ, ಡಾ.ಮುನಿರಾಜು, ರಮೇಶ್, ಮಹೇಶ್ ಮತ್ತಿತರರು ಹಾಜರಿದ್ದರು.







