ಬೆಂಗಳೂರು | ರೈತ ವಿರೋಧಿ ಭೂಸುಧಾರಣೆ, ಎಪಿಎಂಸಿ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ರೈತರ ಧರಣಿ

ಬೆಂಗಳೂರು: ರೈತ ವಿರೋಧಿ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಖಾಸಗಿಕರಣವನ್ನು ಹಿಂಪಡೆಯಲು ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆ ವತಿಯಿಂದ ಧರಣಿ ನಡೆಸಲಾಯಿತು.
ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತ ಕೃಷಿ ಪರಿಷತ್ ರೂಪಿಸಬೇಕು. ಕಾವೇರಿ ನದಿಗೆ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಬೇಕು. ರೇಷ್ಮೆಗೆ ಪ್ರತಿ ಕೆಜಿಗೆ ಕನಿಷ್ಠ 1 ಸಾವಿರ ರೂ. ಬೆಲೆ ನಿಗದಿಯಾಗಬೇಕು. ಪಶುಪಾಲಕರಿಗೆ ಹಾಲಿನ ಪ್ರೋತ್ಸಾಹ ಧನ ಸುಮಾರು 700 ಕೋಟಿ ರೂ. ಹಣ ಬಿಡುಗಡೆ ಮಾಡಿ, ಲೀಟರ್ ಹಾಲಿಗೆ ಕನಿಷ್ಟ 55 ರೂ. ಬೆಲೆ ನಿಗದಿ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.
ಭತ್ತಕ್ಕೆ ಕ್ವಿಂಟಾಲ್‍ಗೆ 3,500 ರೂ. ಬೆಲೆ ನಿಗದಿ ಮಾಡಬೇಕು. ತೊಗರಿಗೆ 12 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಒಂದು ಟನ್ ಕಬ್ಬಿಗೆ ಕನಿಷ್ಠ 5500 ರೂ. ಬೆಲೆ ನಿಗದಿ ಮಾಡಬೇಕು. 2021-22ನೇ ಸಾಲಿನ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಗರ್ ಹುಕುಂ ಸಾಗುವಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಬೇಕು. ನಬಾರ್ಡ್ ಮೂಲಕ ನಮ್ಮ ಸಹಕಾರ ಸಂಘಗಳಿಗೆ ನೀಡುತ್ತಿದ್ದ ಸಾಲವನ್ನು ಕಡಿತ ಮಾಡಿರುವ ರೈತ ವಿರೋಧಿ ನೀತಿ ಖಂಡನೀಯ. ರಾಜ್ಯ ಸರಕಾರ ಸಹಕಾರ ಸಂಘಗಳ ಮುಖಾಂತರ ಸಾಲ ಹೆಚ್ಚು ಸಾಲ ನೀಡುವಂತೆ ಒತ್ತಾಯಿಸಿದರು.
ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ತೀರ್ಮಾನಿಸಿ ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುತ್ತಿರುವ ಕೇಂದ್ರದ ರೈತ ವಿರೋಧಿ ನೀತಿಗೆ ಖಂಡನೀಯ. ಕೃಷ್ಣಾನದಿ ಹಾಗೂ ಆಲಿಮಟ್ಟಿ ಡ್ಯಾಂನ ಎತ್ತರಗೊಳಿಸಬೇಕು. ವಿಜಯಪುರದ ಪ್ರಮುಖ ಬೆಳೆಯಾದ ಒಣದ್ರಾಕ್ಷಿ ಕೆಜಿಗೆ 600 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಸಮಿತಿಯ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ, ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಟಿ.ಆರ್ ಮತ್ತಿತರರು ಉಪಸ್ಥಿತರಿದ್ದರು.







