ಮೂಲ ವೇತನ ನೀಡದಿದ್ದರೆ ಸಾಮೂಹಿಕ ರಾಜೀನಾಮೆ : ರಾಧಾ ಸುರೇಶ್ ಎಚ್ಚರಿಕೆ

ಬೆಂಗಳೂರು : ಶುಶ್ರೂಷಾಧಿಕಾರಿಗಳಿಗೆ ಮೂಲವೇತನ ನೀಡಿದಿದ್ದರೆ, ಗಾಂಧಿ ದಂಡಿನ ಸತ್ಯಾಗ್ರಹ ದಿನದಂದೇ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ರಾಧಾ ಸುರೇಶ್ ಪಿ.ಎನ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂಘದಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಶುಶ್ರೂಷಾಧಿಕಾರಿಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಮಾ.10ರಂದು ಸಭೆ ಮಾಡಲಾಗುವುದು ಎಂದು ತಿಳಿಸಿದ್ದರು. ಸಚಿವರ ಆಶ್ವಾಸನೆಯಂತೆ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದಿರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಮಾ.10ರಂದು ನಡೆಯುವ ಮಹತ್ವದ ಸಭೆಯಲ್ಲಿ ಶುಶ್ರೂಷಾಧಿಕಾರಿಗಳ ‘ಮೂಲ ವೇತನ’ ಸೇರಿದಂತೆ ಇತರೇ ಬೇಡಿಕೆಗಳನ್ನು ಈಡೇರಿಸದಿದ್ದರೆ, ಗಾಂಧಿ ದಂಡಿನ ಸತ್ಯಾಗ್ರಹದ ದಿನವಾದ ಮಾ.12 ರಂದೇ ಮುಖ್ಯಮಂತ್ರಿಗಳಿಗೆ ನಮ್ಮ ಸಾಮೂಹಿಕ ರಾಜಿನಾಮೆಯನ್ನು ನೀಡುತ್ತೇವೆ ಮತ್ತು ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದ್ದಾರೆ.





