ಕಾಂತರಾಜು ಆಯೋಗ ವರದಿ ಕೈಬಿಡದಿದ್ದರೆ ಹೋರಾಟ: ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC: Grok
ಬೆಂಗಳೂರು : ಕಾಂತರಾಜು ಆಯೋಗವು 2014ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯು ಸಂಪೂರ್ಣ ಅವೈಜ್ಞಾನಿಕವಾಗಿದೆ ಮತ್ತು ಇದರಿಂದ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ರಾಜ್ಯ ಸರಕಾರ ಕೂಡಲೇ ವರದಿಯನ್ನು ಕೈಬಿಡದಿದ್ದರೆ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ‘ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ’ ಎಚ್ಚರಿಕೆ ನೀಡಿದೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಡಾ.ಶ್ರೀಕಂಠಯ್ಯ, ಈಗ ಬಿಡುಗಡೆ ಮಾಡಿರುವ ಸಮೀಕ್ಷೆ ವರದಿಯು ಸಮಾಜದ ನಾಗರಿಕರ ವಿಶ್ವಾಸ ಕಳೆದುಕೊಂಡಿದೆ. ಆದುದರಿಂದ ಮತ್ತೊಮ್ಮೆ ವಿಶ್ವಾಸಾರ್ಹತ ಸಮೀಕ್ಷೆ ನಡೆಸಬೇಕು. 2014-15ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.90ರಷ್ಟು ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದ್ದು, ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಕೈಗೊಂಡಿಲ್ಲ ಸಮೀಕ್ಷೆ ಕೈಗೊಳ್ಳುವಾಗ ರಾಜ್ಯದ ಎಲ್ಲ ನಾಗರಿಕರ ಮಾಹಿತಿಯನ್ನು ಸಂಗ್ರಹಿಸಿಲ್ಲ. ಸಕಾಲದಲ್ಲಿ ಸರಕಾರಕ್ಕೆ ವರದಿ ಸಲ್ಲಿಸಲು ವಿಫಲವಾಗಿದೆ ಎಂದರು.
ಹಿಂದಿನ 10 ವರ್ಷಗಳಲ್ಲಿ ರಾಜ್ಯದಲ್ಲಿ ಜನಸಂಖ್ಯೆ ಗಣನೀಯ ಏರಿಕೆ ಕಂಡಿದೆ ಹಾಗೂ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಈ ಅಂಶಗಳನ್ನು ಸಮೀಕ್ಷೆ ಒಳಗೊಂಡಿಲ್ಲ ಎಂದು ಶ್ರೀಕಂಠಯ್ಯ ತಿಳಿಸಿದರು.
10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗೆ ದೂರವಿದ್ದು, ಅಪ್ರಸ್ತುತವಾಗಿವೆ. ನಿಖರತೆ ಕಾಪಾಡಲು ಸಮೀಕ್ಷೆ ವೇಳೆ ಆಧಾರ್ ಲಿಂಕ್ ಮಾಡಿಲ್ಲ. ಸಚಿವ ಸಂಪುಟದಲ್ಲಿ ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ ದತ್ತಾಂಶಗಳ ಅಧ್ಯಯನ ವರದಿ-2024ರ ಮುಚ್ಚಿದ ಲಕೋಟೆಯನ್ನು ತೆರದಿರುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಸಮೀಕ್ಷೆಯಲ್ಲಿ ಶೇ.15-16ರಷ್ಟು ಇರುವ ಒಕ್ಕಲಿಗ ಜನಸಂಖ್ಯೆಯನ್ನು ಅವೈಜ್ಞಾನಿಕ ಸಮೀಕ್ಷೆಯಿಂದಾಗಿ ಶೇ.10.3 ಎಂದು ನಮೂದಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವರದಿಗೆ ಪ್ರತಿಯೊಬ್ಬರ ಸಹಿಯನ್ನು ಪಡೆದಿದ್ದರೆ ಈ ರೀತಿ ತಪ್ಪುಗಳು ಆಗುತ್ತಿರಲಿಲ್ಲ. ಅವೈಜ್ಞಾನಿಕವಾಗಿ ಜಾತಿಜನಗಣತಿ ಮಾಡಿರುವುದರಿಂದ ಒಕ್ಕಲಿಗ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಹೊಸ ಮೀಸಲಾತಿಯಲ್ಲಿ ಪ್ರವರ್ಗ-1ಎ ಪ್ರವರ್ಗ-1ಬಿ ಪ್ರವರ್ಗ-2ಎ ಎಂದು ಮೂರು ಗುಂಪುಗಳಾಗಿ ವಿಂಗಡಿಸಿ ಹಿಂದುಳಿದ ವರ್ಗಗಳಿಗೆ ನಿಗದಿಪಡಿಸಿರುವ ಶೇ.51ರಷ್ಟು ಮೀಸಲಾತಿಯಲ್ಲಿ ಶೇ.28ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ 30 ವರ್ಷಗಳಿಂದ ಒಕ್ಕಲಿಗ ಜನಾಂಗಕ್ಕೆ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಶೇ.4ರಷ್ಟು ಮೀಸಲಾತಿ ನೀಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಈಗಲೂ ಹೊಸ ಮೀಸಲಾತಿಯಲ್ಲಿ ಬೇರೆ ಪ್ರವರ್ಗಗಳಿಗೆ ಹೋಲಿಸಿದಾಗ ಅತಿ ಕಡಿಮೆ ಮೀಸಲಾತಿ ಶೇ.7ರಷ್ಟು ನೀಡಲಾಗಿದೆ. ಅಲ್ಲದೇ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಮೀಸಲಾತಿಯನ್ನು ಶೇ.75ಕ್ಕೆ ಹೆಚ್ಚಿಸಿರುವುದರಿಂದ, ಶೇ.16ರಷ್ಟು ಒಕ್ಕಲಿಗ ಜನಾಂಗಕ್ಕೆ ಶೇ.12ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಶ್ರೀಕಂಠಯ್ಯ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ, ಸದಸ್ಯರಾರ ಅಶೋಕ್, ಗೋಪಿನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.