ಕಾಂತರಾಜು ಆಯೋಗ ವರದಿ | ನೇಕಾರರ ಸಮುದಾಯಕ್ಕೆ ಅನ್ಯಾಯ: ಬಸವರಾಜ ಪಟ್ಟದಾರ್ಯ ಸ್ವಾಮೀಜಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಎಚ್.ಕಾಂತರಾಜ್ ಅಧ್ಯಕ್ಷತೆಯ 'ಜಾತಿಗಣತಿ' ವರದಿಯು ಸಂಪೂರ್ಣ ಅವೈಜ್ಞಾನಿಕವಾಗಿದೆ. ಪ್ರವರ್ಗ-2 ರಲ್ಲಿ ಗುರುತಿಸಿಕೊಂಡಿರುವ ಜಾತಿ ಆಧಾರಿತ ನೇಕಾರರು ಸುಮಾರು 50 ಲಕ್ಷದಷ್ಟು ಜನಸಂಖ್ಯೆ ಇದ್ದರೂ, ವರದಿಯಲ್ಲಿ ಕೇವಲ ಆರೇಳು ಲಕ್ಷ ಮಾತ್ರ ಜನಸಂಖ್ಯೆ ಇದೆ ಎಂದು ಗುರುತಿಸಿರುವುದು ಅನ್ಯಾಯ ಎಂದು ಗುಳೇದ ಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದ್ದಾರೆ.
ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯೋಗವು ಕ್ರಮ ಸಂಖ್ಯೆ 75 ಮತ್ತು 76 ರಲ್ಲಿ ದೇವಾಂಗ, ತೊಗಟವೀರ, ಪದ್ಮಶಾಲಿ, ಪಟ್ಟಸಾಲೆ, ಸ್ವಕುಳ ಸಾಳಿ, ಕುರುಹಿನ ಶೆಟ್ಟಿ, ಶೆಟ್ಟಿಗಾರ್ ಸೇರಿದಂತೆ 49 ಜಾತಿ ಆಧಾರಿತ ನೇಕಾರ ಸಮುದಾಯಗಳನ್ನು ಗುರುತಿಸಿದೆ. ಈ ಪೈಕಿ ಏಳು ಪ್ರಮುಖ ಸಮುದಾಯಗಳ ಜನಸಂಖ್ಯೆಯನ್ನು ವೈಜ್ಞಾನಿಕವಾಗಿ 'ಗಣತಿ' ಮಾಡಿದ್ದರೂ ಸುಮಾರು 38 ರಿಂದ 40 ಲಕ್ಷ ಜನಸಂಖ್ಯೆಯ ನಿಖರತೆ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಸರಕಾರ ‘ಜಾತಿಗಣತಿ' ವರದಿ ಸಚಿವ ಸಂಪುಟದಲ್ಲಿ ಮಂಡಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ‘ಜಾತಿಜ್ವಾಲೆ' ಎದ್ದಿದೆ. ಬಲಾಡ್ಯ ಸಮುದಾಯಗಳೇ ಸಮೀಕ್ಷೆ ಸರಿಯಿಲ್ಲ ಅಸಮರ್ಪಕವಾಗಿದೆ, ವಾಪಸ್ ಪಡೆಯುವುದು ಸೂಕ್ತ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಹೋರಾಟಗಳನ್ನು ರೂಪಿಸುತ್ತಿವೆ. ಆ ಹೋರಾಟಕ್ಕೆ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಬೆಂಬಲವೂ ಇದೆ. ಬೀಸೋದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು ಎಂಬಂತೆ 'ಜಾತಿಜ್ವಾಲೆ' ಯಿಂದ ತಪ್ಪಿಸಿಕೊಂಡು ಅಧಿಕಾರದ ಗದ್ದುಗೆ ಉಳಿಸಿಕೊಳ್ಳಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ತಂತ್ರಕ್ಕೆ ಬರುವ ದಿನಗಳಲ್ಲಿ ತಕ್ಕ ಉತ್ತರ ದೊರೆಯುವುದು ನಿಶ್ಚಿತ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ನಿಖರಪಡಿಸುವಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವಿಫಲವಾಗಿದೆ. ನೇಕಾರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸದೇ ಹೋದಲ್ಲಿ ಇಡೀ ರಾಜ್ಯಾದ್ಯಂತ ನೇಕಾರ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು, ಯುವಕರು, ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಸಿದ್ದರಾಮಯ್ಯ ಆಳ್ವಿಕೆಯಲ್ಲಿ ನೇಕಾರ ಸಮುದಾಯವನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿರುವುದು ಖಂಡನಾರ್ಹ ಎಂದು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್, ಹರಿಹರದ ಪ್ರಭುಲಿಂಗ ಸ್ವಾಮೀಜಿ, ದಿವ್ಯ ಜ್ಞಾನಾನಂದಗಿರಿ ಸ್ವಾಮೀಜಿ, ಒಕ್ಕೂಟದ ಮುಖಂಡ ದಯಾನಂದ ಶೆಟ್ಟಿಗಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







