ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ : ಬಸವರಾಜ ಹೊರಟ್ಟಿ ಆಗ್ರಹ

ಬೆಂಗಳೂರು : ಲಿಂಗಾಯತರೆಲ್ಲರೂ ಸಂಘಟಿತರಾಗಿ ಪ್ರತ್ಯೇಕ ಧರ್ಮವನ್ನು ರಚಿಸಿದರೆ ಮುಂಬರುವ ಪೀಳಿಗೆಗೆ ನೆಮ್ಮದಿಯ ಬದುಕು ಕೊಡಬಹುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಗಾಂಧಿ ಭವನದಲ್ಲಿ ಬಸವಪರ ಸಂಘಟನೆಗಳು, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘಗಳು ಮತ್ತು ಆಕೃತಿ ಪುಸ್ತಕ ಸಹಯೋಗದಲ್ಲಿ ಲೇಖಕ ಜಿ.ಬಿ.ಪಾಟೀಲ್ ರಚಿಸಿರುವ ಲಿಂಗಾಯತ ಚಳವಳಿ 2017-18 ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜಾತಿ ಗಣತಿಯ ಸಮೀಕ್ಷೆಯಲ್ಲಿ ಲಿಂಗಾಯತರನ್ನು 2ಬಿ ಮತ್ತು 3ಬಿಗೆ ಸೇರಿಸಿದ್ದಾರೆ. ಹಿಂದೂ ಲಿಂಗಾಯತ, ಬಣಜಿಗ, ಗಾಣಿಗ ಅಂತ ಬರೆದರೆ ಯಾವುದಕ್ಕೆ ಸೇರಿಸಬೇಕು ಎಂದು ಗೊಂದಲವಾಗುತ್ತದೆ. ಆದ ಕಾರಣ ನಾವೆಲ್ಲ ಸಂಘಟಿತರಾಗಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ಇಳಕಲ್ ಮಠದ ಗುರುಮಹಾಂತಪ್ಪ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಆರ್. ಪಾಟೀಲ್, ಆಕೃತಿ ಪುಸ್ತಕದ ಗುರುಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.





