ಟಿಪ್ಪು ಸುಲ್ತಾನ್ ಎಲ್ಲ ಧರ್ಮಗಳಲ್ಲಿ ನಂಬಿಕೆಯಿಟ್ಟಿದ್ದರು : ಸಿದ್ದರಾಜು

ಬೆಂಗಳೂರು : ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಶೌರ್ಯವನ್ನು ಹೊಂದಿದ್ದರು, ಅವರು ಎಲ್ಲ ಧರ್ಮಗಳಲ್ಲಿ ನಂಬಿಕೆಯಿಟ್ಟಿದ್ದ ಯೋಧ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ದಸಂಸ(ಭೀಮಶಕ್ತಿ) ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ‘ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸತ್ಯವನ್ನು ಒಪ್ಪಿಕೊಳ್ಳದ ಕೆಲವು ಜನರು ಕಥೆಗಳನ್ನು ಕಟ್ಟುತ್ತಾರೆ. ಸೃಷ್ಠಿಯಲ್ಲಿ ಎಲ್ಲವೂ ಸರಿ ಸಮಾನವಾಗಿದೆ. ಮೇಲು-ಕೀಳುಗಳ ನಡುವೆ ಚಿಕಿತ್ಸಕ ನೆಲೆಗಳನ್ನು ಕೊಟ್ಟವರು ದೇಶದ ದಾರ್ಶನಿಕರು ಎಂದು ತಿಳಿಸಿದರು.
ಕೆಲವರು ಟಿಪ್ಪು ಸುಲ್ತಾನ್ ದೇಶದ್ರೋಹಿ ಅವರ ಜಯಂತಿಯನ್ನು ವಿರೋಧಿಸಿದ್ದರು. ಕೋಮು ಗಲಭೆಯನ್ನೇ ಹಬ್ಬಿಸಿದ್ದರು. ಎಲ್ಲರೂ ಟಿಪ್ಪು ಸುಲ್ತಾನ್ ಅವರ ನಿಜ ಇತಿಹಾಸವನ್ನು ತಿಳಿಯಬೇಕು ಎಂದು ಅವರು ತಿಳಿಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಅವರು ಕೆಆರ್‌ಎಸ್ ಕಟ್ಟಿದ್ದಾರೆ ಎಂದು ಪ್ರತಿ ರೈತರು ಅರ್ಥ ಮಾಡಿಕೊಂಡಿದ್ದಾರೆ. ಆದರೆ ಕೆಆರ್‌ಎಸ್‌ಗೆ ಹೋಗಿ ನೋಡಿದರೆ ಅಲ್ಲಿ ಸರ್.ಮಿರ್ಜಾ ಇಸ್ಮಾಯಿಲ್ ಅವರ ಹೆಸರು ಇದೆ. ವಿಶ್ವೇಶ್ವರಯ್ಯ ದಲಿತ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಧಿಸಿ, ರಾಜೀನಾಮೆ ನೀಡಿದ್ದರು. ನಂತರ ಸರ್.ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ ಕೆಆರ್‌ಎಸ್ ನಿರ್ಮಾಣವನ್ನು ಪೂರ್ಣಗೊಳಿಸುತ್ತಾರೆ. ಆದರೆ, ಇತಿಹಾಸದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರೇ ನಿರ್ಮಾಣ ಮಾಡಿದರು ಎಂದು ಹೇಳಲಾಗುತ್ತಿದೆ. ಮಿರ್ಜಾ ಇಸ್ಮಾಯಿಲ್ ಅವರ ಕೊಡುಗೆಯನ್ನು ಎಲ್ಲಿಯೂ ನೆನಪು ಮಾಡಿಕೊಳ್ಳುವುದಿಲ್ಲ ಎಂದು ಬೇಸರ ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಸಂಸ ರಾಜ್ಯಾಧ್ಯಕ್ಷ ಹೆಬ್ಬಾಳ ವೆಂಕಟೇಶ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಸೀಂ ಖಾನ್, ಮಹಿಳಾ ಅಧ್ಯಕ್ಷೆ ರಮಣಿ, ಭೀಮ ಸಂಘಟನೆಗಳ ಮಹಾ ಒಕ್ಕೂಟದ ಕೆ.ಮರಿಯಪ್ಪ, ದಲಿತ ಮುಖಂಡ ಚಿಕ್ಕ ನಾರಾಯಣ, ಎಸ್.ಕೆ.ವೆಂಕಟೇಶ್, ರೈತಕೂಲಿ ಸಂಗ್ರಾಮ ಸಮಿತಿಯ ಶಿವಣ್ಣ ಕಂದೇಗಾಲ, ಪಿವಿಸಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಂಪತ್ತು ಸಮಾನ ಹಂಚಿಕೆಯಾಗಬೇಕಿದ್ದ ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬ ಧರ್ಮಾಧಿಕಾರಿ 5 ಸಾವಿರ ಎಕರೆ, ಒಬ್ಬ ಬಂಡವಾಳಶಾಹಿ 10 ಸಾವಿರ ಎಕರೆ ಭೂಮಿ ಇಟ್ಟುಕೊಂಡರೆ, ದೇಶದ 150 ಕೋಟಿ ಜನರ ಹಿತವನ್ನು ಕಾಯುವುದು ಹೇಗೆ?. ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು.
-ಸಿದ್ದರಾಜು, ನಿವೃತ್ತ ಪೊಲೀಸ್ ಅಧಿಕಾರಿ







