ಶಾಂತಿ ಸಂದೇಶ ಪೋಸ್ಟ್ ವೈರಲ್ : ಸ್ಪಷ್ಟನೆ ಕೊಟ್ಟ ಕಾಂಗ್ರೆಸ್

ಬೆಂಗಳೂರು : ಐಎನ್‌ಸಿ ಕರ್ನಾಟಕ ಫೇಸ್‌ಬುಕ್ ಪುಟದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಶಾಂತಿ ಸಂದೇಶ ಸಾರುವ ನುಡಿಮುತ್ತು ವೈರಲ್ ಕುರಿತು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯಿಸಿದ್ದು, ಇದು ಉದ್ದೇಶ ಪೂರ್ವಕವಲ್ಲ. ಎಂದಿನಂತೆ ಗಾಂಧಿ ಸಂದೇಶ ಹಾಕಲಾಗಿದೆ ಎಂದು ಹೇಳಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉದ್ದೇಶಪೂರ್ವಕವಲ್ಲ. ಆರು ತಿಂಗಳಿನಿಂದ ಬೆಳಗಾವಿ ಅಧಿವೇಶನದ 100 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರತಿದಿನ ಒಂದೊಂದು ಹೇಳಿಕೆಗಳನ್ನು ಹಾಕುವುದು ರೂಢಿ. ಈ ಹಿನ್ನೆಲೆಯಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ ಎಂದರು.
ಸಿದ್ದರಾಮಯ್ಯ ಅವರ ಯುದ್ಧ ಬೇಡ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, ಈ ಬಗ್ಗೆ ಹೀಗಾಗಲೇ ಅವರು ಸ್ಪಷ್ಟನೆ ನೀಡಿದ್ದಾರೆ. ಸರ್ವಪಕ್ಷಗಳ ಸಭೆ ಕರೆದಾಗ ಯಾವುದೇ ಷರತ್ತುಗಳು ಇಲ್ಲದೇ ವಿರೋಧ ಪಕ್ಷದ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶ ರಕ್ಷಣೆಯ ದೃಷ್ಟಿಯಿಂದ ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳಿಗೆ ಕಾಂಗ್ರೆಸ್ ಬದ್ಧವಾಗಿದೆ. ದೇಶ ಮುಖ್ಯ, ನಂತರ ರಾಜಕೀಯ ವಿಚಾರಗಳು. ಇಂದಿರಾಗಾಂಧಿ ಅವರು, ರಾಜೀವ್ ಗಾಂಧಿ ಅವರ ಬಲಿದಾನ ಈ ದೇಶಕ್ಕಾಗಿ ನಡೆದಿದೆ ಎಂದರು.





