ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಮನವಿ

ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್
ಬೆಂಗಳೂರು : ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಿಂದ ಅಂಗೀಕಾರಗೊಂಡ ಮುಜರಾಯಿ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಕೂಡಲೇ ಅಂಕಿತ ಹಾಕಿ ಅನುಷ್ಠಾನಗೊಳಿಸಬೇಕು ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಮಾಡಿದೆ.
ರವಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಒಕ್ಕೂಟದ ಅಧ್ಯಕ್ಷ ಪ್ರೊ.ಕೆ.ಈ. ರಾಧಾಕೃಷ್ಣ ಮಾತನಾಡಿ, ‘ಎ' ಮತ್ತು `ಬಿ' ವರ್ಗದ ದೇವಸ್ಥಾನಗಳ ಹೆಚ್ಚುವರಿ ಆದಾಯದಿಂದ ಅನುಪಾತಿಕವಾಗಿ ಗ್ರಾಮೀಣ ಪ್ರದೇಶದ `ಸಿ' ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಕಾನೂನನ್ನು ತಿದ್ದುಪಡಿಗೊಳಿಸಿದೆ. ಆದರೆ ರಾಜ್ಯಪಾಲರ ಅಂಕಿತಕ್ಕಾಗಿ ಈ ತಿದ್ದುಪಡೆ ಕಾನೂನು ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ ಎಂದರು.
ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳುವುದು ಸರಿಯಲ್ಲ. ಆವೇಶದಲ್ಲಿ ಅವರು ಹೀಗೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣ ಅಥವಾ ಖಾಸಗಿಯವರಿಗೆ ನೀಡಬಾರದು ಎಂದು ಅವರು ಮನವಿ ಮಾಡಿದರು.
ಒಕ್ಕೂಟದ ಮಹಾಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಮಾತನಾಡಿ, ರಾಮಲಿಂಗರೆಡ್ಡಿಯವರು ಮುಜರಾಯಿ ಸಚಿವರಾದ ಬಳಿಕ ಅರ್ಚಕರ ಅನೇಕ ಬೇಡಿಕೆಗಳು ಈಡೇರಿವೆ. ಅರ್ಚಕರಿಗೆ ಮನೆ ಕಟ್ಟಲು 5 ಲಕ್ಷ ರೂ. ನೆರವು ಹಾಗೂ ಅರ್ಚಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ನೀಡಲು ಯೋಚಿಸಿದ್ದಾರೆ ಎಂದು ಹೇಳಿದರು.







