ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳದ ಆರೋಪ: ಬಿಬಿಎಂಪಿ ಇಂಜಿನಿಯರ್ಗೆ ವಾರೆಂಟ್

ಸಾಂದರ್ಭಿಕ ಚಿತ್ರ
ಬೆಂಗಳೂರು :ರಾಜಕಾಲುವೆ ಒತ್ತುವರಿದಾರರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳದ ಆರೋಪ ಪ್ರಕರಣ ಸಂಬಂಧ ಬಿಬಿಎಂಪಿಯ ಮಹದೇವಪುರ ವಲಯದ ಮಳೆನೀರು ಚರಂಡಿ (ಎಸ್ಡಬ್ಲ್ಯೂಡಿ)ಯ ಕಾರ್ಯ ನಿರ್ವಾಹಕ ಇಂಜಿನಿಯರ್ (ಇಇ) ರಾಘವೇಂದ್ರ ವಿರುದ್ಧ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ವಾರಂಟ್ ಹೊರಡಿಸಿದೆ.
2023ರಲ್ಲಿ ಪ್ರಕರಣಗೊಂಡಿದ್ದ ಮಾಧ್ಯಮಗಳ ವರದಿಗಳ ಆಧಾರದ ಮೇಲೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಆನಂತರ, 30 ದಿನಗಳ ಒಳಗೆ ಫಾರ್ಮ್ ಸಂಖ್ಯೆ1 ರಲ್ಲಿ ರಾಜಕಾಲುವೆ ಅತಿಕ್ರಮಣಕಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿತ್ತು.
ಜತೆಗೆ, ಕಾರ್ಯನಿರ್ವಾಹಕ ಇಂಜಿನಿಯರ್ ಸೆಕ್ಷನ್ 104 ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಅಡಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಚರಂಡಿಗಳ ವಿಷಯದಲ್ಲಿ ತಹಶೀಲ್ದಾರ್ಗೆ ವರದಿ ಮಾಡಬೇಕು ಅಥವಾ ದೂರು ನೀಡಬೇಕೆನ್ನುವುದು ಪ್ರಾಥಮಿಕ ಮತ್ತು ಕಡ್ಡಾಯ ಕರ್ತವ್ಯ ಎಂದು ಸೂಚನೆ ಹೊರಡಿಸಿತ್ತು.
ಅದರಂತೆ ಎಸ್ಡಬ್ಲ್ಯೂಡಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಘವೇಂದ್ರ ಮತ್ತು ಸೂಪರಿಂಟೆಂಡೆಂಟ್ ಇಂಜಿನಿಯರ್ ಮಾಲತಿ ಅವರಿಗೆ ಅತಿಕ್ರಮಣದಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಆಗ ಈ ಅಧಿಕಾರಿಗಳು 15 ದಿನಗಳ ಒಳಗೆ ಪ್ರಕರಣಗಳನ್ನು ದಾಖಲಿಸುವುದಾಗಿ ಹೇಳಿದ್ದರು. ಆದರೆ ಪ್ರಕರಣಗಳನ್ನು ದಾಖಲಿಸಲಾಗಿಲ್ಲ. ಇದನ್ನು ಗಮನಿಸಿದ ನ್ಯಾಯಾಲಯವು, ಬಿಬಿಎಂಪಿ ಇಂಜಿನಿಯರ್ಗಳನ್ನು ಅಕ್ರಮಕ್ಕೆ ಪ್ರಚೋದನೆ ನೀಡುವವರೆಂದು ಮತ್ತು ನ್ಯಾಯಾಲಯದ ಮುಂದೆ ಅವರನ್ನು ಆರೋಪಿಗಳೆಂದು ಏಕೆ ಪರಿಗಣಿಸಬಾರದು ಎಂದು ಅಭಿಪ್ರಾಯಪಟ್ಟಿತ್ತು.
ಜತೆಗೆ, ಪಾಲಿಕೆ ಅಧಿಕಾರಿಯು ವರದಿಯಲ್ಲಿ ಅತಿಕ್ರಮಣವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದಿನ ನ್ಯಾಯಾಲಯದ ಆದೇಶಗಳನ್ನು ಅಗೌರವಿಸಿದ್ದಾರೆ ಎಂದು ನ್ಯಾಯವಾದಿ ರವೀಶ್ ಜೆಕೆ ವಾದ ಮಂಡಿಸಿದ್ದರು. ಆನಂತರ, ನ್ಯಾಯಾಲಯ 1 ಲಕ್ಷ ರೂ.ಗಳ ಜಾಮೀನು ನೀಡಬಹುದಾದ ವಾರಂಟ್ ಜಾರಿಗೊಳಿಸಿತು.
ಸದ್ಯ ಈ ಪ್ರಕರಣ ಸಂಬಂಧ ಇಂಜಿನಿಯರ್ (ಇಇ) ರಾಘವೇಂದ್ರ ಜಾಮೀನು ಪಡೆದಿದ್ದು, ಜೂನ್ 14 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.







