‘ನನ್ನ ಜನ್ಮ ದಿನಕ್ಕೆ ಫ್ಲೆಕ್ಸ್ ಹಾಕಿದರೆ ತೆರವುಗೊಳಿಸಿ’ ; ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ

ಬೆಂಗಳೂರು : ‘ನನ್ನ ಜನ್ಮದಿನಕ್ಕೆ ಹಾರೈಸಿ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಫ್ಲೆಕ್ಸ್, ಬ್ಯಾನರ್‍ಗಳನ್ನು ಹಾಕಿದ್ದರೆ ಅವುಗಳ ತೆರವುಗೊಳಿಸಬೇಕೆಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಡಿ.ಕೆ.ಶಿವಕುಮಾರ್, ನಾಳೆ(ಮೇ 15) ವೈಯಕ್ತಿಕ ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಕಾಂಗ್ರೆಸ್ ಸರಕಾರದ ಎರಡನೇ ವರ್ಷದ ಸಾಧನಾ ಸಮಾವೇಶದ ಸ್ಥಳ ಪರಿಶೀಲನೆಗೆ ವಿಜಯನಗರ ಜಿಲ್ಲೆಗೆ ತೆರಳುತ್ತಿರುವುದರಿಂದ ಮೇ 16ರ ಸಂಜೆಯ ವರೆಗೂ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ. ದಯವಿಟ್ಟು ಇದನ್ನು ಅನ್ಯತಾ ಭಾವಿಸದೆ, ಸಹಕರಿಸಬೇಕು ಎಂದು ಅಭಿಮಾನಿಗಳು-ಹಿತೈಷಿಗಳಲ್ಲಿ ವಿನಂತಿಸಿದ್ದಾರೆ.
‘ದೇಶದ ಗಡಿಯಲ್ಲಿ ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭವಿದು. ಹೀಗಾಗಿ ಮೇ15ರಂದು ಯಾರೂ ನನ್ನ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಅದುವೇ ನನಗೆ ಶ್ರೀರಕ್ಷೆ. ನೀವು ಇರುವ ಜಾಗದಿಂದಲೇ ನನಗೆ ಶುಭ ಹಾರೈಸಿ, ಆಶೀರ್ವದಿಸಿ’ ಎಂದು ಶಿವಕುಮಾರ್ ಕೋರಿದ್ದಾರೆ.







