ಬೆಂಗಳೂರು | ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಕೊಲೆ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ವೀರಮಣಿ ಹಾಗೂ ಪವನ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಮೇ.8 ರಂದು ದಾಸರಹಳ್ಳಿ ಮುಖ್ಯ ರಸ್ತೆಯ ಪಕ್ಕದ ಖಾಲಿ ನಿವೇಶನದಲ್ಲಿ ಮದ್ಯಪಾನ ಮಾಡುತ್ತಿದ್ದ ಆರೋಪಿಗಳು, ಜೊತೆಗಿದ್ದ ಅಜೀಜ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅಜೀಜ್ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜೀಜ್ ಮತ್ತು ಆರೋಪಿಗಳು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಮೇ.8ರಂದು ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಾಗ ಮದ್ಯದ ಅಮಲಿನಲ್ಲಿ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪವನ್ ಎಂಬಾತನ ಮೇಲೆ ಅಜೀಜ್ ಹಲ್ಲೆಗೈದಿದ್ದ. ಇದರಿಂದ ಸಿಟ್ಟಿಗೆದ್ದ ಪವನ್ ಹಾಗೂ ವೀರಮಣಿ, ಮರದ ತುಂಡುಗಳಿಂದ ಅಜೀಜ್ನ ಮೇಲೆ ಹಲ್ಲೆ ಮಾಡಿದ್ದರು.
ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಜೀಜ್ನನ್ನು ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೇ.9 ರಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಅಷ್ಟರಲ್ಲಿ ಸ್ಥಳಿಯರೊಬ್ಬರ ಮಾಹಿತಿ ಆಧರಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇತ್ತ ಆಸ್ಪತ್ರೆ ವೈದ್ಯರೂ ಸಹ ಅಪಘಾತದಿಂದ ಅಜೀಜ್ನ ಸಾವು ಸಂಭವಿಸಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಅಜೀಜ್ ಸಾವನ್ನಪ್ಪಿದ್ದ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹತ್ಯೆಯ ವಿಚಾರ ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ ಮಾಹಿತಿ ನೀಡಿದ್ದಾರೆ.







