ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಕಸಾಪಕ್ಕೆ ನೈತಿಕ ಶಕ್ತಿ ತುಂಬಿದವರು : ಮಹೇಶ ಜೋಶಿ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‍ಗೆ ನೈತಿ ಶಕ್ತಿ ತುಂಬಿದವರು ಪ್ರೊ.ಜಿ.ಎಸ್. ಸಿದ್ದಲಿಂಗಯ್ಯ ಎಂದು ಕಸಾಪದ ಅಧ್ಯಕ್ಷ ಡಾ.ಮಹೇಶ್ ಜೋಶಿ ಬಣ್ಣಿಸಿದ್ದಾರೆ.
ಬುಧವಾರ ನಗರದ ಚಾಮರಾಜಪೇಟೆಯಲ್ಲಿರುವ ಕಸಾಪದ ಕೃಷ್ಣರಾಜ ಪರಿಷತ್ ಮಂದಿರದಲ್ಲಿ ಆಯೋಜಿಸಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿ.ಎಸ್.ಸಿದ್ದಲಿಂಗಯ್ಯ ಅವರು ಕಸಾಪದ ಅಧಿಕಾರವಹಿಸಿಕೊಂಡಾಗ ಸಂದಿಗ್ಧ ಸನ್ನಿವೇಶದಲ್ಲಿತ್ತು. ಮೊದಲ ಸಲ ಸರಕಾರದ ಆಡಳಿತಾಧಿಕಾರಿಗಳನ್ನು ಕಂಡ ಮೇಲೆ ಪರಿಷತ್ ಮೊದಲಿನಂತೆ ಮುಂದುವರಿಯುವುದೇ? ಎನ್ನುವ ಆತಂಕ ಎಲ್ಲರನ್ನೂ ಕಾಡುತ್ತಿತ್ತು ಎಂದರು.
ಅಂತಹ ಸನ್ನಿವೇಶದಲ್ಲಿ ಅಧಿಕಾರ ಸ್ವೀಕರಿಸಿದ ಜಿ.ಎಸ್. ಸಿದ್ದಲಿಂಗಯ್ಯ ಅವರು ‘ನಾನು ಈ ಕ್ಷಣದವರೆಗೂ ಶುದ್ಧ ವ್ಯಕ್ತಿಯಾಗಿ ನಡೆದುಕೊಂಡು ಬಂದಿದ್ದೇನೆ. ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿಸಲಾರ’ ಎಂಬ ಘೋಷಣೆ ಮಾಡಿದ್ದಲ್ಲದೆ, ಹಾಗೇ ನಡೆದು ಕೊಂಡರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಡುಮಾಮಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ.ನಾಗರಾಜ ಮೂರ್ತಿ, ಬರಹಗಾರ ಪ್ರೊ.ಕೆ.ಇ.ರಾಧಾಕೃಷ್ಣ, ಹಿರಿಯ ಸಾಹಿತಿ ಡಾ.ಗೊರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗ ನೇ.ಭ.ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ಮತ್ತಿತರರು ಹಾಜರಿದ್ದರು.







