ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪುತ್ಥಳಿ ಲೋಕಾರ್ಪಣೆಗೊಳಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ರಾಜ್ಯಕ್ಕೆ ದಕ್ಷ ಆಡಳಿತ ನೀಡಿದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ಗುಂಡೂರಾವ್ ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಸಿದ್ದಾರೆ.
ಬುಧವಾರ ಇಲ್ಲಿನ ಮೆಜೆಸ್ಟಿಕ್ ಬಸ್ ಸ್ಟಾಂಡ್ ಬಳಿಯ ವೃತ್ತದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ.ಆರ್ ಗುಂಡೂರಾವ್ ಅವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇಂದಿರಾ ಗಾಂಧಿ, ಸಂಜಯ್ ಗಾಂಧಿ ಅವರಿಗೆ ಆಪ್ತರಾಗಿದ್ದ ಆರ್.ಗುಂಡೂರಾವ್ ಧೈರ್ಯದಿಂದ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ವಿಶೇಷವಾಗಿ ಶಾಸಕರ ಒತ್ತಡಕ್ಕೆ ಮಣಿಯುತ್ತಿರಲಿಲ್ಲ. ವರ್ಗಾವಣೆ ದಂಧೆಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದರು. ಗುಂಡೂರಾವ್ ಅವರು ಜಾತಿ ನೋಡಲಿಲ್ಲ. ಜನಪರ ಕೆಲಸಗಳಿಗೆ ಸದಾ ಸ್ಪಂದಿಸುತ್ತಿದ್ದರು. ಸಂತೋಷದಿಂದ ಆರ್.ಗುಂಡೂರಾವ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದ್ದೇನೆ ಎಂದು ಅವರು ಹೇಳಿದರು.
ಆರ್.ಗುಂಡೂರಾವ್ ಅವರ ಪುತ್ರ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಜ್ಯದ ಮುಖ್ಯಮಂತ್ರಿಯವರಾಗಿದ್ದ ನಮ್ಮ ತಂದೆಯವರು, 40 ವರ್ಷಗಳ ಹಿಂದೆಯೇ ಬೆಂಗಳೂರು ನಗರದ ಬೆಳವಣಿಗೆಯ ದೂರದೃಷ್ಟಿಯಿಟ್ಟುಕೊಂಡು ಮೆಜೆಸ್ಟಿಕ್ ನಂತಹ ಬಸ್ ಸ್ಟಾಂಡ್ ಅನ್ನು ಕಟ್ಟಿಸಿದರು. ಇಂದು ಅದೇ ಬಸ್ ಸ್ಟಾಂಡ್‌ನ ಆವರಣದಲ್ಲಿ ತಂದೆಯವರ ಪುತ್ಥಳಿ ಅನಾವರಣಗೊಂಡಿರುವುದು ಸಂತೋಷದ ಸಂಗತಿ ಎಂದರು.
ರಾಜಕೀಯ ಬೆಳವಣಿಗೆಗಳ ನಡುವೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ದೊರೆಯಿತು. ಒಂದು ಸಾಮಾನ್ಯ ಬ್ರಾಹ್ಮಣ ಕುಟುಂಬದಿಂದ ಬಂದವರು ಮುಖ್ಯಂತ್ರಿಯಾಗುವುದು ಅಷ್ಟು ಸುಲುಭವಲ್ಲ. ದೇವರಾಜ್ ಅರಸ್ ಅವರ ಸಂಪುಟದಲ್ಲಿ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ದಕ್ಷ ಆಡಳಿತವನ್ನು ನೀಡಿದ್ದಾರೆ. ಬೆಂಗಳೂರು ನಗರದ ಬೆಳವಣಿಗೆಗೆ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ರಾಜ್ಯದಲ್ಲಿ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳನ್ನು ನೀಡಿದರು ಎಂದು ಅವರು ಹೇಳಿದರು.