ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ಪ್ರದಾನ | ಶಿವರಾಜಕುಮಾರ್ ಅವರಿಗೆ ʼಜೀವಮಾನ ಸಾಧನೆ ಪ್ರಶಸ್ತಿʼ
ದುನಿಯಾ ವಿಜಯ್ ಅತ್ಯುತ್ತಮ ನಿರ್ದೇಶಕ, ಗಣೇಶ್ ಅತ್ಯುತ್ತಮ ನಟ

ಬೆಂಗಳೂರು : ರವಿವಾರದಂದು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಗಳನ್ನು ವಿತರಿಸಿದ್ದು, ಕನ್ನಡದ ನಟ ಶಿವರಾಜಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶಿವರಾಜಕುಮಾರ್ ಟ್ರೋಫಿ, ಹಂಸಲೇಖ ಅವರ ಐದನಿ ಸಂಸ್ಥೆಯಿಂದ ಚಿನ್ನದ ಪದಕ ಮತ್ತು ಸನ್ಮಾನ ಪತ್ರವನ್ನು ನೀಡಲಾಗಿದೆ. ಪ್ರಶಸ್ತಿಗಳ ಆರನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಮೊದಲ ಬಾರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ದುನಿಯಾ ವಿಜಯ್, ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಣೇಶ್, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರೋಶನಿ ಪ್ರಕಾಶ್, ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪೃಥ್ವಿ ಕೋಣನೂರು ನಿರ್ದೇಶನದ ‘ಹದಿನೇಳೆಂಟು' ಚಿತ್ರಕ್ಕೆ ನೀಡಲಾಯಿತು.
ಚೊಚ್ಚಲ ಪ್ರಶಸ್ತಿಗಳು, ತಾಂತ್ರಿಕ ಪ್ರಶಸ್ತಿಗಳು, ಸಂಗೀತ ಪ್ರಶಸ್ತಿಗಳು, ನಟನೆ ಮತ್ತು ನಿರ್ದೇಶನ ಪ್ರಶಸ್ತಿಗಳು ಮತ್ತು ವಿಶೇಷ ತೀರ್ಪುಗಾರರ ಪ್ರಶಸ್ತಿ ಸೇರಿ ಒಟ್ಟು 30 ಪ್ರಶಸ್ತಿಗಳನ್ನು ಐದು ವಿವಿಧ ವಿಭಾಗಗಳಲ್ಲಿ ನೀಡಲಾಯಿತು. ಹಿರಿಯ ಸಂಗೀತ ಸಂಯೋಜಕ ಹಂಸಲೇಖ, ಹಿರಿಯ ನಿರ್ದೇಶಕ ನಾಗಾಭರಣ, ನಟಿ ಸುಮನ್ ನಗರ್ಕರ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ.ಕಾಮಿನಿ ರಾವ್ ಸೇರಿದಂತೆ ಇತರ ಗಣ್ಯರು ಪ್ರಶಸ್ತಿಗಳನ್ನು ವಿತರಿಸಿದರು.





