ಆಂತರಿಕ ಸಂವಹನಕ್ಕೆ ‘ಬಿಸಿಪಿ ಚಾಟ್’ ಎಂಬ ಹೊಸ ಆ್ಯಪ್: ಟೆಕ್ನಾಲಜಿಯತ್ತ ಮತ್ತೊಂದು ಹೆಜ್ಜೆ ಇಟ್ಟ ಬೆಂಗಳೂರು ಪೊಲೀಸರು

ಬೆಂಗಳೂರು : ರಾಜಧಾನಿ ಬೆಂಗಳೂರು ನಗರ ಪೊಲೀಸರು ಆಂತರಿಕ ಸಂವಹನ ಮತ್ತು ಕಾರ್ಯಾಚರಣೆಗಳನ್ನು ಸುಧಾರಿಸಲು ‘ಬಿಸಿಪಿ ಚಾಟ್’ ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಇದು ಠಾಣೆಯ ಇನ್‍ಸ್ಪೆಕ್ಟರ್‍ಗಳಿಂದ ಹಿಡಿದು ನಗರ ಪೊಲೀಸ್ ಆಯುಕ್ತರವರೆಗಿನ ಎಲ್ಲಾ ಅಧಿಕಾರಿಗಳಿಗೆ ಸುರಕ್ಷಿತ ಮತ್ತು ವೇಗದ ಸಂವಹನ ವೇದಿಕೆಯನ್ನು ಒದಗಿಸಲಿದೆ.
ಇಲಾಖೆಯ ಆಂತರಿಕ ಸಂವಹನ ಹಾಗೂ ದೈನಂದಿನ ಕಾರ್ಯಾಚರಣೆಗಳನ್ನು ಹೆಚ್ಚು ವೇಗ ಮತ್ತು ಸುರಕ್ಷಿತವಾಗಿ ಮಾಡಿಕೊಳ್ಳುವ ಉದ್ದೇಶದಿಂದ ‘ಬಿಸಿಪಿ ಚಾಟ್’ ಎನ್ನುವ ವಿಶೇಷ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಬೆಂಗಳೂರು ನಗರದ ಎಲ್ಲ ಪೊಲೀಸ್ ಠಾಣೆಗಳ ಇನ್‍ಸ್ಪೆಕ್ಟರ್‍ಗಳಿಂದ ಹಿಡಿದು ಎಸಿಪಿ, ಡಿಸಿಪಿ, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಆಯುಕ್ತರು ಹಾಗೂ ನಗರ ಪೊಲೀಸ್ ಆಯುಕ್ತರು ಈ ಆ್ಯಪ್‍ಗೆ ಸೇರ್ಪಡೆಗೊಂಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.
‘ಬಿಸಿಪಿ ಚಾಟ್’ ಆ್ಯಪ್ ಪೊಲೀಸ್ ಅಧಿಕಾರಿಗಳಿಗಷ್ಟೇ ಬಳಕೆಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಬಳಕೆಗೆ ಲಭ್ಯವಿಲ್ಲ. ಆ್ಯಪ್‍ನೊಂದಿಗೆ, ದಿನನಿತ್ಯದ ಕಾರ್ಯವೈಖರಿ ಮತ್ತಷ್ಟು ಸಮರ್ಥವಾಗಿ ನಿರ್ವಹಣೆಯಾಗಲಿದ್ದು, ನಗರದಲ್ಲಿ ಅಪರಾಧ ನಿಯಂತ್ರಣ, ತುರ್ತು ನಿರ್ವಹಣೆ ಮತ್ತು ತುರ್ತು ತಾಣಗಳ ಮೇಲ್ವಿಚಾರಣೆಗೆ ನೆರವಾಗಲಿದೆ ಎಂದು ಇಲಾಖೆ ವಿವರಿಸಿದೆ.
‘ಬಿಸಿಪಿ ಚಾಟ್’ ಆ್ಯಪ್ ಬಳಸುವ ಉದ್ದೇಶ: ‘ಗಣ್ಯ ವ್ಯಕ್ತಿಗಳ ಭೇಟಿ ಮತ್ತು ಸಂಚಾರ ವ್ಯವಸ್ಥೆ ನಿರ್ವಹಣೆ, ಮಾಧ್ಯಮ ವರದಿಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಬ್ಬುವ ಸುದ್ದಿಗಳ ಪರಿಶೀಲನೆ, ದೈನಂದಿನ ಅಪರಾಧ ಮಾಹಿತಿ ಮತ್ತು ಆ ವಿಷಯದ ಪ್ರಸ್ತುತ ಸ್ಥಿತಿಗತಿ ತಿಳಿಯಲು, ಸರಕಾರದ ಆದೇಶಗಳು, ಸುತ್ತೋಲೆಗಳು ಮತ್ತು ನೋಟಿಸ್‍ಗಳನ್ನು ಎಲ್ಲ ಪೊಲೀಸರಿಗೆ ತಲುಪಿಸಲು, ಹಳೆಯ ಪ್ರಕರಣಗಳ ಮಾಹಿತಿ ಶೋಧಿಸಲು ಹಾಗೂ ಅವುಗಳ ಮುಂದಿನ ಕ್ರಮವನ್ನು ಸುಲಭಗೊಳಿಸಲು ‘ಬಿಸಿಪಿ ಚಾಟ್’ ಆ್ಯಪ್ ಸಹಕಾರಿಯಾಗಲಿದೆ. ಅಲ್ಲದೆ, ಆ್ಯಪ್‍ನಲ್ಲಿ ಕ್ಷಿಪ್ರ ಶೋಧ ವ್ಯವಸ್ಥೆ ಇರುವುದರಿಂದ ಹಳೆಯ ದಾಖಲೆಗಳನ್ನು ಬೇಗನೆ ಹುಡುಕಿ ಪಡೆಯಬಹುದಾಗಿದೆ.







