ಹಜ್ ಭವನ ಮಾದರಿಯಲ್ಲೆೇ ‘ಕ್ರೈಸ್ತ ಭವನ’ ನಿರ್ಮಾಣಕ್ಕೆ ಒತ್ತಾಯ

ಬೆಂಗಳೂರು : ‘ಹಜ್ ಭವನ ಮಾದರಿಯಲ್ಲೇ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಕಲ್ಯಾಣಕ್ಕಾಗಿ ‘ಕ್ರೈಸ್ತ ಭವನ’ ನಿರ್ಮಿಸಬೇಕು. ಜತೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಕ್ರೈಸ್ತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ‘ಅಹಿಂದ ಚಳವಳಿ’ ನೇತೃತ್ವದಲ್ಲಿ ಸಭೆ ನಡೆಸಿದ ಕ್ರೈಸ್ತ ಸಮುದಾಯದ ಮುಖಂಡರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಆ ಮೂಲಕ, ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಇಲ್ಲವಾಗಿರುವ ಹುನ್ನಾರ ನಡೆಸಿದೆ ಎಂದು ದೂರಿದರು.
ಸಾಮಾಜಿಕ-ಶೈಕ್ಷಣಿಕವಾಗಿ ಹಿಂದುಳಿದಿರುವ ಕ್ರೈಸ್ತ ಸಮುದಾಯಕ್ಕೆ ಮುಸ್ಲಿಮ್ ಸಮುದಾಯದ ಮಾದರಿಯಲ್ಲೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರತ್ಯೇಕ ವರ್ಗವೊಂದನ್ನು ಸೃಷ್ಟಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ನೀಡಬೇಕು. ಮತಾಂತರಗೊಂಡ ಕ್ರೈಸ್ತರನ್ನು ಪ್ರವರ್ಗ-1ರಲ್ಲಿಯೇ ಮುಂದುವರಿಸಬೇಕು. ಪ್ರಾರ್ಥನ ಸ್ಥಳಗಳಿಗೆ ಹಾಗೂ ಸ್ಮಶಾನಕ್ಕೆ ಅಗತ್ಯ ಭೂಮಿಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಡಾ.ರೆ.ಮನೋಹರ್ ಚಂದ್ರಪ್ರಸಾದ್, ಡಾ.ಯೂನುಸ್ ಜೋನ್ಸ್, ಗುಣಸಾಗರ್, ಫಾಸ್ಟರ್ ಎಮೋನಲ್ ಸೇರಿದಂತೆ ಕ್ರೈಸ್ತ ಸಮುದಾಯಗಳ ಗಣ್ಯರು, ಅಹಿಂದ ಚಳವಳಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.







