ರಾಜ್ಯ ಪರಿಸರ ಪ್ರಶಸ್ತಿಗಳನ್ನು ಶಿಫಾರಸ್ಸು ಮಾಡಲು ಎಸಿಎಸ್ ನೇತೃತ್ವದ ಸಮಿತಿ ರಚನೆ

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯಂದು ನೀಡಲಾಗುವ 2024-25ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಳನ್ನು ನೀಡಲು ಅರ್ಹ ವ್ಯಕ್ತಿ, ಸಂಸ್ಥೆಗಳಿಂದ ಸ್ವೀಕರಿಸಲಾದ ಅರ್ಜಿ, ನಾಮ ನಿರ್ದೇಶನಗಳನ್ನು ಪರಿಶೀಲಿಸಿ ಪ್ರಶಸ್ತಿಗಾಗಿ ಸರಕಾರಕ್ಕೆ ಸಂಭಾವ್ಯ ಪುರಸ್ಕೃತರ ಹೆಸರನ್ನು ಶಿಫಾರಸ್ಸು ಮಾಡಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ(ಎಸಿಎಸ್) ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ನಗರಾಭಿವೃದ್ಧಿ, ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಅರಣ್ಯ ಪಡೆ ಮುಖ್ಯಸ್ಥರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ, ಪೌರಾಡಳಿತ ಇಲಾಖೆಯ ನಿರ್ದೇಶಕ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಹಾಗೂ ಅರಣ್ಯ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ನಿರ್ದೇಶಕ(ತಾಂತ್ರಿಕ ಕೋಶ)ರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ಸಮಿತಿಯು ಪ್ರಸಕ್ತ ಸಾಲಿಗೆ ಮಾತ್ರ ಅನ್ವಯವಾಗಿದ್ದು, ತನ್ನ ಶಿಫಾರಸ್ಸುಗಳನ್ನು ಜೂ.3ರೊಳಗೆ ಸರಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.





