ಸೂಕ್ಷ್ಮ ಕೈಗಾರಿಕೆಗಳ ಪ್ರತ್ಯೇಕ ಇಲಾಖೆ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಮುಂದಿನ ದಿನಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ (ಎಂಎಸ್‌ಎಂಇ) ಪ್ರತ್ಯೇಕ ಇಲಾಖೆಗಳಿವೆ. ಆದೇ ರೀತಿ ನಮ್ಮ ರಾಜ್ಯದಲ್ಲಿ ಮಾಡುತ್ತೇನೆ ಎಂದು ತಿಳಿಸಿದರು.
ಎಂಎಸ್ಎಇ ಬೆಳೆದಷ್ಟು ರಾಜ್ಯದ ಅಭಿವೃದ್ಧಿಯಾಗುತ್ತದೆ. ರಾಜ್ಯ ಅಭಿವೃದ್ಧಿಯಾದರೆ ತಲಾ ಆದಾಯ ಹೆಚ್ಚಾಗುತ್ತದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಸುಮಾರು 175 ಲಕ್ಷ ಉದ್ಯೋಗಗಳನ್ನು ನೀಡಿವೆ. ಸುಮಾರು 20ಲಕ್ಷ ಎಂಎಸ್ ಎಇಗಳು ಇವೆ. ಇನ್ನೂ ಹೆಚ್ಚಾಗಬೇಕು ಎನ್ನುವುದು ನನ್ನ ಆಸೆ, ಕೃಷಿ ಕ್ಷೇತ್ರವನ್ನು ಬಿಟ್ಟರೆ, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ ಕ್ಷೇತ್ರ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರವಾಗಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮಾರುಕಟ್ಟೆಯಲ್ಲಿ ಯಾವ ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಇದೆಯೋ ಅಂತಹ ಉದ್ಯೋಗಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕರ್ನಾಟಕ ಆರ್ಥಿಕವಾಗಿ ಶಕ್ತಿಯುತವಾಗಿದೆ. ಕರ್ನಾಟಕದಿಂದ ಕೇಂದ್ರಕ್ಕೆ 4.30 ಲಕ್ಷ ಕೋಟಿ ರೂ. ತೆರಿಗೆ ಹೋಗುತ್ತದೆ. 65ರಿಂದ 70ಸಾವಿರ ಕೋಟಿ ರೂ. ವಾಪಸ್ ಬರುತ್ತದೆ. ಕರ್ನಾಟಕಕ್ಕೆ ಅನ್ಯಾಯವಾಗಬಾರದು. ಕೈಗಾರಿಕೋದ್ಯಮಿಗಳು ಅವಕಾಶ ಸಿಕ್ಕಾಗ ನಮ್ಮ ತೆರಿಗೆ ನಮಗೆ ನೀಡಿ ಎಂದು ಕೇಂದ್ರ ಸರಕಾರಕ್ಕೆ ಕೇಳಬೇಕು ಎಂದು ತಿಳಿಸಿದರು.
ಕರ್ನಾಟಕ ಕೂಡ ಒಕ್ಕೂಟ ರಾಜ್ಯವಾಗಿದೆ. ಅದು ಅಭಿವೃದ್ಧಿಯಾಗಬೇಕು. ಕರ್ನಾಟಕ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಕೇಂದ್ರ ಸರಕಾರ ಎಂದರೆ ರಾಜ್ಯಗಳ ಒಕ್ಕೂಟ, ನಾವು ತೆರಿಗೆ ನೀಡುತ್ತೇವೆ. ಅದರಿಂದ ಸರಕಾರ ನಡೆಸಲಾಗುತ್ತಿದೆ ಅದಕ್ಕಾಗಿ ನಮ್ಮ ತೆರಿಗೆ ಶೇ. 50ರಷ್ಟು ಕೊಡಬೇಕು ಎಂದು ಕೇಳುತ್ತಿದ್ದೇವೆ ಎಂದು ತಿಳಿಸಿದರು.
ನಾವು ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ನಿರ್ವಹಣೆ ಮಾಡಲು ಪ್ರಯತ್ನ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ಸರಿಯಾಗಿ ಇಲ್ಲದಿದ್ದರೆ ಬಂಡವಾಳ ಹೂಡಿಕೆ ಆಗುವುದಿಲ್ಲ. ಕಾನೂನು ಸುವ್ಯವಸ್ಥೆಗೂ ಬಂಡವಾಳಕ್ಕೂ ಸಂಬಂಧವಿದೆ. ಕಾಸಿಯಾದ ಎಲ್ಲ ಬೇಡಿಕೆಗಳ ಕುರಿತು ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಸಭೆ ಕರೆಯುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸೂಕ್ಷ್ಮ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ಕೆಎಸ್ಎಸ್ ಐಡಿಸಿ ಅಧ್ಯಕ್ಷ ಟಿ.ರಘುಮೂರ್ತಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.







