ಕನ್ನಡದಲ್ಲಿ ವ್ಯವಹರಿಸಹಲು ನಿರಾಕರಿಸಿರುವ ಎಸ್‍ಬಿಐ ಸಿಬ್ಬಂದಿ ನಡೆ ಖಂಡಿಸಿ ಕರವೇ ಪ್ರತಿಭಟನೆ

ಬೆಂಗಳೂರು : ಕನ್ನಡದಲ್ಲಿ ವ್ಯವಹರಿಸಹಲು ನಿರಾಕರಿಸಿರುವ ಎಸ್‍ಬಿಐನ ಆನೇಕಲ್ ತಾಲೂಕಿನ ಚಂದಾಪುರ ಶಾಖೆಯ ಅಧಿಕಾರಿ ನಡೆ ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ನೇತೃತ್ವದಲ್ಲಿ ನಗರದ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿನ ಎಸ್‍ಬಿಐ ಕೇಂದ್ರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
‘ಚಂದಾಪುರದ ಶಾಖೆಯಲ್ಲಿ ಕನ್ನಡಿಗರ ಆತ್ಮಾಭಿಮಾನಕ್ಕೆ ಧಕ್ಕೆ ತಂದ, ಉದ್ಧಟತನದಿಂದ ವರ್ತಿಸಿದ ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಬೇಕು. ಕರ್ನಾಟಕದ ಎಲ್ಲ ಎಸ್‍ಬಿಐ ಶಾಖೆಗಳಲ್ಲಿ ಕನ್ನಡ ಬಾರದ, ಕನ್ನಡದಲ್ಲಿ ವ್ಯವಹರಿಸಲು ಒಪ್ಪದ ಸಿಬ್ಬಂದಿಯನ್ನು ತಕ್ಷಣವೇ ಅವರ ಮಾತೃ ರಾಜ್ಯಗಳಿಗೆ ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಲ್ಲ ಕಚೇರಿ, ಶಾಖೆಗಳಲ್ಲಿ ಶೇ.80ರಷ್ಟು ಎಲ್ಲ ಹಂತದ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಾಗಿಡಬೇಕು. ಉಳಿದ ಹುದ್ದೆಗಳಿಗೂ ಕನ್ನಡ ಬಲ್ಲ, ಕನ್ನಡದಲ್ಲಿ ವ್ಯವಹರಿಸುವ ಸಾಮರ್ಥ್ಯ ಇರುವವರನ್ನು ಮಾತ್ರ ನೇಮಿಸಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ಎಸ್‍ಬಿಐ ಶಾಖೆಗಳಲ್ಲಿ ಕನ್ನಡದಲ್ಲಿ ವ್ಯವಹರಿಸುವುದನ್ನು ಕಡ್ಡಾಯಗೊಳಿಸಿ, ಇದಕ್ಕೆ ಸಂಬಂಧಿಸಿದಂತೆ ಕನ್ನಡ ತರಬೇತಿಯನ್ನು ಸಿಬ್ಬಂದಿಗೆ ಒದಗಿಸಬೇಕು. ಕನ್ನಡಿಗ ಗ್ರಾಹಕರಿಗೆ ಆದ್ಯತೆ ನೀಡಿ, ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಗೌರವಿಸುವಂತಹ ಕಾನೂನುಬದ್ದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಎಸ್‍ಬಿಐ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆಯಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಧರ್ಮರಾಜ್‍ಗೌಡ, ಉಪಾಧ್ಯಕ್ಷರು ವೀರಭದ್ರ, ಸಂಘಟನಾ ಕಾರ್ಯದರ್ಶಿ ವಿನೋದ್ ಅಬ್ಬಿಗೆರೆ ಮತ್ತಿತರರು ಹಾಜರಿದ್ದರು.







