‘ವಿಧಾನಸೌಧ ಗೈಡೆಡ್ ವಾಕಿಂಗ್ ಟೂರ್’ ನಾಳೆ ಉದ್ಘಾಟನೆ

ಬೆಂಗಳೂರು : ವಿಧಾನ ಮಂಡಲದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಧಾನಸೌಧದ ಭವ್ಯತೆ ಮತ್ತು ವಿಧಾನಸಭೆಯ ಸಭಾಂಗಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸುವ ‘ವಿಧಾನಸೌಧ ಗೈಡೆಡ್ ವಾಕಿಂಗ್ ಟೂರ್’ ಕಾರ್ಯಕ್ರಮ ನಾಳೆ(ಮೇ 25) ಉದ್ಘಾಟನೆಯಾಗಲಿದೆ.
ಪ್ರವಾಸೋದ್ಯಮ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ವಿಧಾನಸಭೆ ಸಚಿವಾಲಯದ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪಾಲ್ಗೊಳ್ಳಲಿದ್ದಾರೆ.
ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧವು ಬೆಂಗಳೂರು ನಗರದ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ದೇಶಿಯ ಮತ್ತು ವಿದೇಶಿ ಪ್ರವಾಸಿಗರು ವಿಧಾನಸೌಧದ ಕಟ್ಟಡದ ಹೊರಭಾಗದಲ್ಲಿ ನಿಂತು ವೀಕ್ಷಣೆ ಮಾಡುತ್ತಿದ್ದರು. ಇದೀಗ ಒಳಾಂಗಣ ಮತ್ತು ಕಲಾಪ ನಡೆಯುವ ಸಭಾಂಗಣ ವೀಕ್ಷಣೆಗೆ ಉತ್ಸುಕರಾಗಿದ್ದಾರೆ.





