ರಾಜಕೀಯ ಅಕಾಡೆಮಿ ತೆರೆಯಲು ಚಿಂತನೆ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ರಾಜಕೀಯ ಅಕಾಡೆಮಿ ತೆರೆಯಲು ಚಿಂತಿಸಲಾಗುತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಹೇಳಿದ್ದಾರೆ.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕರ್ನಾಟಕ ವಿಧಾನ ಸಭೆಯ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮಾರ್ಗದರ್ಶಿ ನಡಿಗೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜಕೀಯ ಕಾಲೇಜು ಆರಂಭಿಸಿ ತರಬೇತಿ ನೀಡುವ ಬಗ್ಗೆ ಕಾನೂನಾತ್ಮಕವಾಗಿ ಚರ್ಚೆ ಮಾಡಿ ಅನುಷ್ಠಾನದ ಬಗ್ಗೆ ನಿರ್ಧಾರ ಮಾಡುತ್ತೇವೆ. ವೈದ್ಯರಿಗೆ, ಇಂಜಿನಿಯರ್‌ಗಳಿಗೆ ಕಾಲೇಜುಗಳಿವೆ. ಆದರೆ ರಾಜಕಾರಣಿಯಾಗಲು ಕಾಲೇಜಿಲ್ಲ, ಅದಕ್ಕೊಂದು ಅಕಾಡೆಮಿ ಇದ್ದರೆ ಉತ್ತಮ ರಾಜಕಾರಣಿಯಾಗಲು ಅನುಕೂವಾಗಲಿದೆ ಎಂದು ಉಲ್ಲೇಖಿಸಿದರು.
ವಿಧಾನಸೌಧದ ಕಟ್ಟಡದಲ್ಲಿ ಓಡಾಡಿದರೆ ಅನೇಕ ಪಾರಂಪರಿಕ ಕಟ್ಟಡಗಳು ಕಣ್ಣಿಗೆ ಕಟ್ಟುವಂತೆ ಮಾಡಲಿದೆ. 75 ವರ್ಷಗಳ ಕಾಲ ವಿಧಾನಸೌಧದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಸಾರ್ವಜನಿಕರು ಪಾಸ್ ಪಡೆದುಕೊಂಡು ಬರಬೇಕಿತ್ತು. ಆದರೆ ಈಗ ಕರ್ನಾಟಕ ಮಾತ್ರವಲ್ಲ ದೇಶದ ಜನತೆಗೆ ತೋರಿಸುವ ಕೆಲಸ ಮಾಡಿದ್ದೇವೆ ಎಂದರು.
ಮಾರ್ಗದರ್ಶಿ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸ ಅರ್ಥಮಾಡಿಸುವ ಕೆಲಸವಾಗಲಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರು ದೇಶದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನಸೌಧ ನಮ್ಮದು ಎಂಬ ಭಾವನೆಯನ್ನು ನಮ್ಮ ರಾಜ್ಯದ ಜನರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಸೌಧ, ಬೆಂಗಳೂರಿನ ಪ್ರಮುಖ ಐತಿಹಾಸಿಕ ಮತ್ತು ಆಡಳಿತದ ಸಂಕೇತವಾಗಿದ್ದು. ಮಾರ್ಗದರ್ಶಿ ಪ್ರವಾಸಿ ನಡಿಗೆಯು ಈ ಕಟ್ಟಡದ ಐತಿಹಾಸಿಕದ ಮಹತ್ವ, ಶಿಲ್ಪಕಲೆಯ ವೈಭವ ಮತ್ತು ಅದರ ಪ್ರಮುಖ ಭಾಗಗಳನ್ನು ಪರಿಚಯಿಸುತ್ತದೆ. ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದಾಗಿದೆ. ನುರಿತ ಗೈಡ್‍ಗಳು ವಿಧಾನಸೌಧ ಆವರಣದ ಕುರಿತು ಸಮಗ್ರ ಪರಿಚಯ ಸಹಿತ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಲಿದ್ದಾರೆ ಎಂದು ತಿಳಿಸಿದರು.







