ಆರೋಗ್ಯ ಸೇವೆ ಹಾಗೂ ಉನ್ನತ ಶಿಕ್ಷಣಗಳು ಉಚಿತವಾಗಿರಬೇಕು : ಸಚಿವ ಸಂತೋಷ್ ಲಾಡ್

ಧಾರವಾಡ : ಉನ್ನತ ಶಿಕ್ಷಣವನ್ನು ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಬೇಕು. ಬಡಜನರ ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಅತಿ ಹೆಚ್ಚು ಮಹತ್ವ ನೀಡಿದರೆ ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಸೋಮವಾರ ಧಾರವಾಡದ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಶಾಸಕರ, ಜಿಲ್ಲಾ ಮಟ್ಟದ ಅಧಿಕಾರಿಗಳ ಹಾಗೂ ಸರಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಗುಣಮಟ್ಟದ ಉನ್ನತ ಶಿಕ್ಷಣ ನೀಡಬೇಕು. ಉನ್ನತ ಮಟ್ಟದ ಶಿಕ್ಷಣವನ್ನು ನೀಡಬೇಕಾದಲ್ಲಿ, ಪಠ್ಯಪುಸ್ತಕಗಳನ್ನು ನವೀಕರಿಸಬೇಕು. ಮಧ್ಯಮ ವರ್ಗದವರು ಶಿಕ್ಷಣಕ್ಕೆ ಅತಿ ಹೆಚ್ಚು ಹಣವನ್ನು ವ್ಯಯ ಮಾಡುತ್ತಿದ್ದಾರೆ. ಬರುವ ಪೀಳಿಗೆಗೆ ನವೀಕರಣ ಆಗಿರುವ ಪಠ್ಯಪುಸ್ತಕ ಇಲ್ಲವೆಂದರೆ ಶೈಕ್ಷಣಿಕ ಸುಧಾರಣೆ ಅಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ಸಣ್ಣ ಸಣ್ಣ ಉದ್ಯಮ ಕೈಗಾರಿಕೆಗಳು ಅತಿ ಹೆಚ್ಚು ಅವನತಿ ಆಗುತ್ತಿವೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಹಣಕಾಸಿನ ನೆರವು ನೀಡಬೇಕು ಎಂದರು.
ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಫ್ರೊ.ಎಂ. ಗೋವಿಂದರಾವ್ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದಲ್ಲಿ ಆಗಿರುವ ಅಭಿವೃದ್ಧಿ, ಬದಲಾವಣೆ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ, ಅದಕ್ಕೆ ಪೂರಕವಾಗಿ ಅಸಮತೋಲನ, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಅಗತ್ಯವಿರುವ ಅಂಶಗಳನ್ನು ಶಿಫಾರಸು ಮಾಡುವ ಹಿನ್ನೆಲೆಯಲ್ಲಿ ನಮ್ಮ ಸಮಿತಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಧ್ಯಯನ ಪ್ರವಾಸ ಮಾಡುತ್ತಿದೆ ಎಂದರು.
ಕಳೆದ ಏಳು ತಿಂಗಳಿಂದ ಸಮಿತಿಯು ರಾಜ್ಯದಲ್ಲಿ ಸಂಚರಿಸಿ ಅಧ್ಯಯನ ಮಾಡುವುದರ ಜೊತೆಗೆ ಹಿಂದುಳಿದ ತಾಲೂಕುಗಳಲ್ಲಿ ಇನ್ನೂ ಏನೇನು ಅಭಿವೃದ್ಧಿ ಕಾರ್ಯಕ್ರಮಗಳು ಆಗಬೇಕು, ಕೊರತೆಗಳೇನಿವೆ ಎಂಬುದನ್ನು ಹಲವು ಸೂಚ್ಯಂಕಗಳ ಮೂಲಕ ಅರಿಯುತ್ತಿದ್ದೇವೆ. ಜೊತೆಗೆ ಸಂಘ-ಸಂಸ್ಥೆಗಳ, ಅಧಿಕಾರಿಗಳಿಂದ ಸಂವಾದ ಮೂಲಕ ಮಾಹಿತಿ ಪಡೆಯುತ್ತಿದ್ದೇವೆ ಎಂದು ಅವರು ತಿಳಿಸಿದರು.
ಶಾಸಕರಾದ ಎನ್.ಎಚ್.ಕೋನರಡ್ಡಿ, ಮಹೇಶ್ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಮಾತನಾಡಿದರು. ಸಭೆಯಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ, ಸದಸ್ಯ ಮಹೇಂದ್ರ ಸಿಂಘಿ, ಹಿರಿಯ ವಕೀಲ ಸೋಮಶೇಖರ ಜಾಡರ, ವಿಜ್ಞಾನಿ ಡಾ.ಎಸ್.ಎಂ.ಶಿವಪ್ರಸಾದ್, ಸಿಎಂಡಿಆರ್ ಮಾಜಿ ನಿರ್ದೇಶಕ ಡಾ.ಅಣ್ಣಿಗೇರಿ, ಮಹಿಳಾ ಹೋರಾಟಗಾರ್ತಿ ಶಾರದಾ ಗೋಪಾಲ, ಉದ್ಯಮಿ ಜಗದೀಶ್ ಹಿರೇಮಠ, ಸರಕಾರೇತರ ಸಂಸ್ಥೆಯ ಮುಖ್ಯಸ್ಥೆ ಅನ್ಬನ್ ಕುಮಾರ್ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ವಿವಿಧ ವಿಷಯಗಳನ್ನು ಮಂಡಿಸಿದರು.
ಸಮಿತಿ ಸದಸ್ಯರಾದ ಡಾ.ಸೂರ್ಯನಾರಾಯಣ ಎಂ.ಎಚ್., ಡಾ.ಎಸ್.ಟಿ.ಬಾಗಲಕೋಟ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ವೇದಿಕೆಯಲ್ಲಿ ಇದ್ದರು.







