ಎಸ್ಸಿ-ಎಸ್ಟಿ ಉದ್ದಿಮೆದಾರರಿಗೆ ಅಗತ್ಯ ನೆರವು: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆರ್ಥಿಕ ಶಕ್ತಿ ತುಂಬಲು ಅಗತ್ಯತ ನೆರವನ್ನು ಸರಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಭೂಮಿ ಬೆಲೆ ಹೆಚ್ಚಾಗಿರುವುದರಿಂದ ಎಲ್ಲರೂ ಬೆಂಗಳೂರಿನಲ್ಲಿಯೇ ಉದ್ದಿಮೆ ಪ್ರಾರಂಭಿಸುವುದರ ಬದಲಾಗಿ ಆಯಾ ಜಿಲ್ಲೆಯವರು ಆಯಾ ಜಿಲ್ಲೆಗಳಲ್ಲಿಯೇ ಕೈಗಾರಿಕೆ ಪ್ರಾರಂಭಿಸಲು ಉದ್ದಿಮೆದಾರರಿಗೆ ಸೂಚಿಸಲಾಗಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರ ಕೈಗಾರಿಕೆಗಳಿಗೆ ಇದುವರೆಗೂ 192 ಎಕರೆ ಮಂಜೂರು ಆಗಿದ್ದು, ಇನ್ನೂ 280 ಎಕರೆ ಪ್ರದೇಶದ ಅವಶ್ಯಕತೆ ಇರುವುದಾಗಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸಬೇಕು. ಅದೇ ರೀತಿ, ಎಸ್ಸಿ,ಎಸ್ಟಿ ಸಮುದಾಯಕ್ಕೆ ಮೀಸಲಿರಿಸಿದ ಕೈಗಾರಿಕಾ ಜಾಗವನ್ನು ಬೇರೆಯವರಿಗೆ ನೀಡಲಾಗಿದೆ ಎನ್ನುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಉದ್ದಿಮೆದಾರರಿಗೆ ಬರಬೇಕಾಗಿರುವ ಬಾಕಿ ಇರುವ ಹಣ ಶೀಘ್ರ ಬಿಡುಗಡೆಗೊಳಿಸಲು ಹಾಗೂ ಕೆಐಎಡಿಬಿ ಇ ಖಾತಾ ಹಂಚಿಕೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಶರಣಬಸಪ್ಪ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಎನ್.ಎಸ್.ಭೋಸರಾಜು, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಸೇರಿದಂತೆ ಇನ್ನಿತರ ಪ್ರಮುಖರಿದ್ದರು.







