ಬೆಂಗಳೂರು | ʼವಿಶೇಷ ಚೇತನರ ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆʼಯ ಕುರಿತು ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು: ವಿಶೇಷ ಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯು(ಡಿಇಪಿಡಬ್ಲೂಡಿ), ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಎಎಲ್ ಐಎಂಸಿಒ) ಸಹಯೋಗದೊಂದಿಗೆ ʼವಿಶೇಷ ಚೇತನರ ಸಬಲೀಕರಣಕ್ಕಾಗಿ ಕೃತಕ ಬುದ್ಧಿಮತ್ತೆʼ ಎಂಬ ಶೀರ್ಷಿಕೆಯಡಿ ಮಹತ್ವದ ಸಮ್ಮೇಳನ ಇಂದು (ಮೇ 30) ಬೆಂಗಳೂರಿನಲ್ಲಿ ನಡೆಯಿತು.
"ಕೃತಕ ಬುದ್ಧಿಮತ್ತೆ (ಎ.ಐ.) ಜೀವನವನ್ನು ಪರಿವರ್ತಿಸುತ್ತಿದೆ ಮತ್ತು ಪ್ರಪಂಚದಾದ್ಯಂತ ಸಮಗ್ರ ಅಭಿವೃದ್ಧಿಗೆ ಕಾರಣವಾಗುತ್ತಿದೆ". ಬೆಂಗಳೂರಿನಲ್ಲಿ ಇಂದು ನಡೆದ ವಿಶೇಷಚೇತನರ ಸಬಲೀಕರಣಕ್ಕಾಗಿ ಎಐ ಕುರಿತಾದ ರಾಷ್ಟ್ರೀಯ ಸಮ್ಮೇಳನದ ಪ್ರಮುಖ ಸಂದೇಶ ಇದಾಗಿತ್ತು. ಈ ಕಾರ್ಯಕ್ರಮವು ಪ್ರಮುಖ ತಜ್ಞರು, ಸರಕಾರಿ ಅಧಿಕಾರಿಗಳು, ತಂತ್ರಜ್ಞರು ಮತ್ತು ವಕೀಲರನ್ನು ಒಟ್ಟುಗೂಡಿಸಿ ಎಐ ವಿಶೇಷ ಚೇತನರಿಗೆ ಸುಲಭ ಲಭ್ಯತೆ ಮತ್ತು ಅವಕಾಶಗಳನ್ನು ಹೇಗೆ ಹೆಚ್ಚಿಸುತ್ತಿದೆ ಎನ್ನುವುದನ್ನು ಪ್ರದರ್ಶಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಇ.ಪಿ.ಡಬ್ಲ್ಯೂ.ಡಿ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು, "ಕೃತಕ ಬುದ್ಧಿಮತ್ತೆಯಿಂದ ಎಲ್ಲರನ್ನೂ ಒಳಗೊಳ್ಳುವ ಹೊಸ ಯುಗ ಪ್ರಾರಂಭವಾಗಿದೆ" ಎಂದು ಹೇಳಿದರು.
ಸಮ್ಮೇಳನದಲ್ಲಿ ರಾಜೇಶ್ ಅಗರ್ವಾಲ್ ಅವರು ಎಐ ಮತ್ತು ಸುಲಭಲಭ್ಯತೆಯ ಮೇಲೆ ಕೇಂದ್ರೀಕರಿಸಿದ ನಾಲ್ಕು ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು.
1.ಮಿಷನ್ ಎಐ ಪ್ರವೇಶ ಸಾಧ್ಯತೆ (ಸುಲಭ ಲಭ್ಯತೆ)
2. ಮಿಷನ್ ಎಐ: ವಿಶೇಷಚೇತನರನ್ನು ಸಬಲೀಕರಣಗೊಳಿಸಲು ಸಹಾಯಕ ತಂತ್ರಜ್ಞಾನಗಳು ಮತ್ತು ಪರಿಕರಗಳಲ್ಲಿ ಎಐ ಅನುಷ್ಠಾನ
3.ರಾಷ್ಟ್ರೀಯ ವಿಶೇಷಚೇತರಿಗೆ ಬೆಂಬಲ ಎಐ ಚಾಟ್ ಬಾಟ್
4. ಯುನೈಟೆಡ್ ಬೆನಿಫಿಟ್ಸ್ ಇಂಟರ್ಫೇಸ್ (ಯು.ಬಿ.ಐ.)
ಸಹಾಯಕ ತಂತ್ರಜ್ಞಾನದಲ್ಲಿ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿಯಾಗುವ ಪರಿಹಾರಗಳನ್ನು ನೀಡುವ ಮೂಲಕ, ಅಂತರ್ಗತ ಡಿಜಿಟಲ್ ಪರಿಸರ ವ್ಯವಸ್ಥೆಗಳ ಸೃಷ್ಟಿಗೆ ಎಐ ಅನ್ನು ಬಳಸಿಕೊಳ್ಳುವ ಗುರಿಯನ್ನು ಈ ಧ್ಯೇಯಗಳು ಹೊಂದಿವೆ.
ಸಮ್ಮೇಳನವು ಕೃತಕ ಬುದ್ಧಿಮತ್ತೆಯು ಹೆಚ್ಚು ಅಂತರ್ಗತ ಮತ್ತು ಸುಲಭಲಭ್ಯವಾಗುವ ಭಾರತವನ್ನು ರಚಿಸುವಲ್ಲಿ ಹೇಗೆ ಸಾಮರ್ಥ್ಯವನ್ನು ಹೆಚ್ಚಿಸಲು ಕಾರಣವಾಗಬಹುದು ಎಂಬುದನ್ನು ಪ್ರದರ್ಶಿಸಿತು.
ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ (ಎಎಲ್ ಐಎಂಸಿಒ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್, ಐಐಟಿ ದೆಹಲಿಯ ಪ್ರಾಧ್ಯಾಪಕ ಪ್ರೊ. ಪಿ.ವಿ.ಎಂ. ರಾವ್ ಮತ್ತು ಪ್ರೊ. ರೋಹನ್ ಪಾಲ್, ಅನುವಾಧಿನಿ ಸಿಇಒ ಡಾ.ಬುದ್ಧ ಚಂದ್ರಶೇಖರ್, ಓಪನ್ ಎಐ ಸಂಸ್ಥೆಯ ಪ್ರಜ್ಞಾ ಮಿಶ್ರಾ, ಎಂಟರ್ಪ್ರೈಸ್ ಎಐ ಮತ್ತು ಸ್ಟ್ರಾಟಜಿ-ಸರ್ವಮ್ ಎಐ ಮುಖ್ಯಸ್ಥ ಆಲೇಖ್ ಶರಣ್, ಕಾರ್ಯ ಇಂಕ್ ನ ಸಿಇಒ ಮನು ಚೋಪ್ರಾ, ಮೈಕ್ರೋಸಾಫ್ಟ್ ಇನ್ನೋವೇಶನ್ ಹಬ್ ನ ಸಿಟಿಒ ಸಂದೀಪ್ ಆಲೂರ್, ಲೆನೊವೊ ನ ಮಾರ್ಕೆಟಿಂಗ್ ನಿರ್ದೇಶಕ ಚಂದ್ರಿಕಾ ಜೈನ್, ಸ್ಟ್ಯಾಕ್-ಜೆನ್ ಸಹ-ಸ್ಥಾಪಕ ಮತ್ತು ಚೀಫ್ ಬ್ಯುಸಿನೆಸ್ ಆಫೀಸರ್ ಅರ್ಷದ್ ಸಯ್ಯದ್, ಇಕ್ವಿಬೀಯಿಂಗ್ ಫೌಂಡೇಶನ್ ನ ಸಿಇಒ ಡಾ. ಅನಂತಲಕ್ಷ್ಮಿ ವೆಂಕಟರಾಮನ್, ಅಸಿಸ್-ಟೆಕ್ ಫೌಂಡೇಶನ್ ನ ಸಹ-ಸಂಸ್ಥಾಪಕ ಮತ್ತು ಸಿಇಒ ಶೇಖರ್ ನಾಯ್ಕ್, ಐಐಐಟಿ ಬೆಂಗಳೂರಿನ ಮಾನವ-ಕೇಂದ್ರಿತ ಕಂಪ್ಯೂಟಿಂಗ್ ವಿಭಾಗ ಮುಖ್ಯಸ್ಥರು ಅಮಿತ್ ಪ್ರಕಾಶ್, ಗೂಗಲ್ ಇಂಡಿಯಾ ಪ್ರತಿನಿಧಿ ಅಮೃತಾ ಕಾಮತ್, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕ್ ರೂಪ್ ಕೌರ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಮಹಾನಿರ್ದೇಶಕ ಅಭಿಷೇಕ್ ಸಿಂಗ್, ಇನ್ಕಲೂಷನ್ ಅಡ್ವೋಕೇಟ್ ಶೇಖರ್ ನಾಯ್ಕ್ ಭಾಗವಹಿಸಿದ್ದರು.
ಅಮೆರಿಕದ ಬಫಲೋ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ವೇಣು ಗೋವಿಂದರಾಜು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.







