ಬೆಂಗಳೂರು | ಸ್ಪಾ ಮಾಲಕನ ಅಪಹರಿಸಿ ಹಲ್ಲೆ ಪ್ರಕರಣ: ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಸಲೂನ್ ಆ್ಯಂಡ್ ಸ್ಪಾ ಮಾಲಕನನ್ನು ಅಪಹರಿಸಿ ಹಲ್ಲೆಗೈದ ಪ್ರಕರಣದಡಿ ಮೂವರು ಆರೋಪಿಗಳನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರಾಯಲ್ ಚಾಯ್ಸ್ ಸಲೂನ್ ಆ್ಯಂಡ್ ಸ್ಪಾ ಮಾಲಕ ಸಂಜು(40) ಎಂಬಾತ ಹಲ್ಲೆಗೊಳಗಾಗಿದ್ದು, ಆತ ನೀಡಿದ್ದ ದೂರಿನನ್ವಯ ಆರೋಪಿಗಳಾದ ಸ್ಮಿತಾ(32), ಕಾವ್ಯಾ(25) ಹಾಗೂ ಮೊಹಮ್ಮದ್(40) ಎಂಬವರನ್ನು ಬಂಧಿಸಲಾಗಿದೆ ಎಂದು ಅಮೃತಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸ್ಮಿತಾ ಮಾಲಕತ್ವದ ಸಲೂನ್ನಲ್ಲಿ ಮ್ಯಾನೇಜರ್ ಆಗಿದ್ದ ಸಂಜು, ಇತ್ತೀಚೆಗೆ ಕೆಲಸ ಬಿಟ್ಟು ಸ್ನೇಹಿತನೊಂದಿಗೆ ಸೇರಿ ತಾನೇ ಹೊಸ ಸಲೂನ್ ಮತ್ತು ಸ್ಪಾ ಆರಂಭಿಸಿದ್ದ. ಇದರಿಂದ ಆರೋಪಿಗಳು ಕೋಪಗೊಂಡಿದ್ದರು.
ಮೇ 29ರ ಗುರುವಾರ ರಾತ್ರಿ 8 ಗಂಟೆಯ ಸುಮಾರಿಗೆ ಬೆಂಗಳೂರಿನ ಭುವನೇಶ್ವರಿ ನಗರ ಮುಖ್ಯರಸ್ತೆಯಲ್ಲಿರುವ ರಾಯಲ್ ಚಾಯ್ಸ್ ಸಲೂನ್ ಆ್ಯಂಡ್ ಸ್ಪಾನಲ್ಲಿದ್ದ ಸಂಜುಗೆ ಆರೋಪಿಗಳು ಹಲ್ಲೆಗೈದಿದ್ದು, ಆ ಬಳಿಕ ಬಲವಂತವಾಗಿ ಸಂಜುನನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಆರೋಪಿಗಳು, ದಾಸರಹಳ್ಳಿ ಮುಖ್ಯರಸ್ತೆ ಮುಖಾಂತರ ಜಕ್ಕೂರು ಕಡೆ ಕರೆದೊಯ್ದು, ಡ್ಯಾಗರ್, ಬಿಯರ್ ಬಾಟಲ್ನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ, ಸಂಜುಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇವೆ ಎಂದು ಆರೋಪಿಗಳು ಜೀವ ಬೆದರಿಕೆ ಹಾಕಿ, ಅಮೃತ ನಗರದ ಶಾರದಾ ಸ್ಕೂಲ್ ಬಳಿ ಬಿಟ್ಟು ಹೋಗಿದ್ದಾರೆ. ಅನಂತರದಲ್ಲಿ ಚಿಕಿತ್ಸೆ ಪಡೆದುಕೊಂಡು ಅಮೃತಹಳ್ಳಿ ಪೊಲೀಸ್ ಠಾಣೆಗೆ ಸಂಜು ದೂರು ನೀಡಿದ್ದು, ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.







