ಬೆಂಗಳೂರು | ದಲಿತರ ಮೇಲಿನ ದೌರ್ಜನ್ಯದ ತಡೆಯಲು ಆಗ್ರಹಿಸಿ ಧರಣಿ

ಬೆಂಗಳೂರು : ದಲಿತರ ಮೇಲೆ ಹೆಚ್ಚಾಗುತ್ತಿರುವ ಕೊಲೆ, ದೌರ್ಜನ್ಯ, ಅಸ್ಪೃಶ್ಯತೆ, ಮರ್ಯಾದೆ ಹತ್ಯೆ ತಡೆಯಲು ರಾಜ್ಯ ಸರಕಾರ ಕ್ರಮ ವಹಿಸಲು ಆಗ್ರಹಿಸಿ, ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ರಾಜ್ಯದಲ್ಲಿ ದಲಿತರ ಮೇಲೆ ಜಾತಿ ತಾರತಮ್ಯ, ದೌರ್ಜನ್ಯ, ಸಾಮಾಜಿಕ ಬಹಿಷ್ಕಾರಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೇಸ್ ಸರಕಾರ ದಲಿತರಿಗೆ ಕಾನೂನು ರಕ್ಷಣೆ ಒದಗಿಸಲು 33 ವಿಶೇಷ ಪೋಲಿಸ್ ಠಾಣೆ ಸ್ಥಾಪಿಸಿದ್ದಾರೆ. ಆದರೆ ಇದೆ ಸಂದರ್ಭದಲ್ಲಿ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ. ಈ ಠಾಣೆಗಳು ಏನು ಮಾಡುತ್ತಿವೆ? ಎಂದು ಧರಣಿನಿರತರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ದಲಿತರು ಪೋಲಿಸ್ ಠಾಣೆಗಳಿಗೆ ದೂರು ನೀಡಲು ಹೋದರೆ ಎಫ್‍ಐಆರ್ ಹಾಕುದಿಲ್ಲ. ಆರೋಪಿಗಳನ್ನು ಬಂಧಿಸದೇ ಮೇಲ್ಜಾತಿಯ ಪಟಭದ್ರ ಹಿತಾಶಕ್ತಿಗಳ ಪರ ಪೊಲೀಸರು ನಿಂತಿದ್ದಾರೆ. ದಲಿತರಿಗೆ ರಕ್ಷಣೆ ಸಿಗುತ್ತಿಲ್ಲ. ಕಾಂಗ್ರೇಸ್ ಸರಕಾರದ ಪೊಲೀಸ್ ವೈಫಲ್ಯ ಕಣ್ಣಿಗೆ ರಾಚ್ಚುವಂತಿದೆ ಎಂದು ಆರೋಪಿಸಿದರು.
ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರನ್ನು ಅದೇ ಗ್ರಾಮದ ಸವರ್ಣೀಯ ರೌಡಿಶೀಟರ್ ಅನಿಲ್ ಕುಮಾರ್ ಎಂಬವನು ಕೊಲೆಮಾಡಿ. ಹುಲ್ಲು ಮೆದೆಯಲ್ಲಿ ಸುಟ್ಟು ಹಾಕಿದ ಘೋರ ಘಟನೆ ಸಂಭವಿಸಿದೆ. ಜಯಕುಮಾರ್ ಪತ್ನಿ ಲಕ್ಷ್ಮಿ ತನ್ನ ಗಂಡನ ಕೋಲೆಯ ಬಗ್ಗೆ ದೂರು ನೀಡಿದ್ದರು. ಪೊಲೀಸರು ನಿರ್ಲಕ್ಷ ವಹಿಸಿ ಆತನು ಆತ್ಮಹತ್ಯೆ ಮಾಡಿಕೊಂಡಿರುವುದ್ದಾಗಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಕೂಡಲೇ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣಗಾಲ ಗ್ರಾಮದಲ್ಲಿ ದಲಿತ ಯುವಕ ಸ್ವಾಮಿನಾಥ ದೇವಾಲಯ ಪ್ರವೇಶವನ್ನು ಅದೇ ಗ್ರಾಮದ ಸವರ್ಣೀಯರ ಗುಂಪು ತಡೆದು ಜಾತಿನಿಂದನೆ ಅವಮಾನ ಮಾಡಿದ ಘಟನೆ ಸಂಭವಿಸಿದೆ. ಈ ಕುರಿತು ದೊಡ್ಡೇರಿ ಪೊಲೀಸ ಠಾಣೆಗೆ ದೂರು ನೀಡಿ 7 ದಿನಗಳು ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಬಲಾಡ್ಯರ, ಪ್ರಭಾವದಿಂದ ಪೊಲೀಸರು ದೂರು ದಾಖಲಿಸಿ ವಿಳಂಬ ಮಾಡಿ ಎಫ್‍ಐಆರ್ ಹಾಕಿದ್ದಾರೆ ಆದರೆ ಇದುವರೆವಿಗೂ ಯಾರನ್ನೂ ಬಂಧಿಸಿಲ್ಲ ಎಂದು ಆರೋಪಿಸಿದರು.
ಧರಣಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ಕರ್ನಾಟಕ ರಾಜ್ಯ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್, ದಲಿತ್ ಶೋಷಣ್ ಮುಕ್ತಿ ಮಂಚ್‍ನ ರಾಜ್ಯ ಸದಸ್ಯ ಎನ್.ನಾಗರಾಜ ಮತ್ತಿತರರು ಹಾಜರಿದ್ದರು.







