ಅಡಿಕೆ ಹಾಳೆ ರಪ್ತಿಗೆ ನಿರ್ಬಂಧ ; ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ

ಸಾಂದರ್ಭಿಕ ಚಿತ್ರ | (PC : X)
ಬೆಂಗಳೂರು : ಭಾರತದಿಂದ ರಪ್ತಾಗುವ ಅಡಿಕೆ ಹಾಳೆಯಿಂದ ತಯಾರಿಸಿದ ತಟ್ಟೆ, ಲೋಟ ಮತ್ತಿತರ ಊಟದ ಪರಿಕರಗಳು ಆರೋಗ್ಯಕ್ಕೆ ಹಾನಿಕರ, ಕ್ಯಾನ್ಸರ್ ಕಾರಕ ಎಂದು ಅಮೆರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ ಹೊರಡಿಸಿರುವ ಆಮದು ನಿರ್ಬಂಧವನ್ನು ತೆರವುಗೊಳಿಸಲು ಪ್ರಧಾನಿ ಮೋದಿ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು.ಬಸವರಾಜ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ಅಮೆರಿಕಾದ ಈ ನಿರ್ಬಂಧವು ಅಮೆರಿಕಾ ಮಾತ್ರವಲ್ಲದೇ ಇಡೀ ಜಗತ್ತಿನ ಅಡಿಕೆ ಹಾಳೆ ಮಾರುಕಟ್ಟೆ ಮೇಲೆ ಕರಾಳ ಪರಿಣಾಮ ಬೀರುತ್ತದೆ. ಅಡಿಕೆ ಹಾಳೆಗಳಿಂದ ತಯಾರಾಗುತ್ತಿದ್ದ ಊಟದ ಪರಿಕರಗಳು ಜಾಗತಿಕವಾಗಿ ಸುಮಾರು 3.50ಸಾವಿರ ಕೋಟಿ ರೂ.ವಹಿವಾಟು ಇದ್ದು, ಇದರಲ್ಲಿ ಕರ್ನಾಟಕದ ಕೊಡುಗೆಯೇ 2.50ಸಾವಿರ ಕೋಟಿ ರೂ. ನಷ್ಟಿದೆ. ದೇಶದಲ್ಲೇ ಅತಿ ದೊಡ್ಡ ಅಡಿಕೆ ಬೆಳೆ ಬೆಳೆಯುವ ರಾಜ್ಯ ಕರ್ನಾಟಕವಾಗಿದ್ದು, ಈ ನಿರ್ಬಂಧದಿಂದ ಅಡಿಕೆ ಬೆಳೆಗಾರರು ಸೇರಿದಂತೆ ಈ ಉದ್ಯಮದಲ್ಲಿ ತೊಡಗಿರುವ ಅನೇಕ ಜನರ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ರಬ್ಬರ್ ಬೆಳೆಗೂ ಅರಣ್ಯ ನಾಶ ಮಾಡಿ ಬೆಳೆದಿಲ್ಲ ಎಂದು ಸರ್ಟಿಫಿಕೇಟ್ ಒದಗಿಸಲು ನಿರ್ಬಂಧ ಒಡ್ಡುತ್ತಿವೆ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲು ಇತ್ತೀಚಿನ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಸಂದರ್ಭವನ್ನು ಕೂಡ ಅಮೆರಿಕಾ ದುರುಪಯೋಗ ಮಾಡಿಕೊಂಡಿದೆ. ಇಂತಹ ಕತ್ತು ಹಿಸುಕುವ ಅಮೆರಿಕಾದ ಕ್ರಮಗಳನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಕಟುವಾಗಿ ಖಂಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





