ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ | ಡಿಸಿಪಿ ಗಂಭೀರ, ಹಲವು ಪೊಲೀಸರಿಗೆ ಗಾಯ

ಬೆಂಗಳೂರು: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಸಂದರ್ಭದಲ್ಲಿ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಡಿಸಿಪಿ ಸೈದುಲು ಅಡಾವತ್ ಅವರ ಎರಡೂ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಬುಧವಾರ ಮಧ್ಯಾಹ್ನ ಕ್ರೀಡಾಂಗಣದ ಗೇಟ್ ಸಂಖ್ಯೆ 19ರ ಬಳಿ ಡಿಸಿಪಿ ಸೈದುಲು ಅಡಾವತ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ, ಏಕಾಏಕಿ ಅಭಿಮಾನಿಗಳ ಗುಂಪು ನುಗ್ಗಿದ್ದು, ಹೆಚ್ಚಿನ ಸಿಬ್ಬಂದಿ ಇರದಿದ್ದರಿಂದ ಡಿಸಿಪಿಯವರೇ ಲಾಠಿ ಹಿಡಿದು, ಸಾಧ್ಯವಾದಷ್ಟು ಗುಂಪು ಚದುರಿಸಿದ್ದಾರೆ. ಆದರೂ ಸಹ ಜನ ದಟ್ಟಣೆಯ ನಡುವೆ ಸಿಲುಕಿಕೊಂಡಿದ್ದ ಸೈದುಲು ಅಡಾವತ್ ಅವರು ಗಾಯಗೊಂಡಿದ್ದಾರೆ.
ಅದೇ ರೀತಿ, ವಿವಿಧ ಪೊಲೀಸ್ ಠಾಣೆಗಳ ಸಿಬ್ಬಂದಿ ಸಹ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





