ಸಿಎಂ, ಡಿಸಿಎಂ ಬಂಧನ ಯಾಕ್ಕಿಲ್ಲ ?: ಜೆಡಿಎಸ್
"ಕಾಲ್ತುಳಿತ ಪ್ರಕರಣ ಕಾಂಗ್ರೆಸ್ ಸರಕಾರದ ಪ್ರಾಯೋಜಿತ ಕೊಲೆ"

ಬೆಂಗಳೂರು, ಜೂ. 7: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಕಾಂಗ್ರೆಸ್ ಸರಕಾರದ ಪ್ರಾಯೋಜಿತ ಕೊಲೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಶನಿವಾರ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂಧನ ಯಾಕಿಲ್ಲ ? ಎಂದು ಪ್ರಶ್ನಿಸಿದೆ.
ಆರ್‌ಸಿಬಿ ವಿಜಯೋತ್ಸವದಲ್ಲಿ ಪ್ರಚಾರ ಪಡೆಯಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಪೈಪೋಟಿಯೇ ಈ ಮಹಾದುರಂತಕ್ಕೆ ಕಾರಣ ಎಂದು ಜೆಡಿಎಸ್ ದೂರಿದೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯ ಅತಿಥಿ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯ ಅತಿಥಿ. ಇವರಿಬ್ಬರ ರಾಜಕೀಯ ಪ್ರತಿಷ್ಠೆ. ನಾನೇ ಎಂಬ ಅಹಂನಿಂದಾಗಿ ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡಿದ್ದಾಗಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಕಾಲ್ತುಳಿತ ದುರ್ಘಟನೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕಾಂಗ್ರೆಸ್ ಸರಕಾರ ಆರ್‌ಸಿಬಿ ಮತ್ತು ಕೆಎಸ್‌ಸಿಎ ವಿರುದ್ಧ ದೂರು ದಾಖಲಿಸಿದೆ ಎಂದು ಜೆಡಿಎಸ್ ಆರೋಪಿಸಿದೆ.







