ಕಾಲ್ತುಳಿತ ಪ್ರಕರಣ | ಹೈಕೋರ್ಟ್ ಮೆಟ್ಟಿಲೇರಿದ ಆರ್‌ಸಿಬಿ, ಡಿಎನ್ಎ ಎಂಟರ್‌ಟೈನ್‌ಮೆಂಟ್

ಬೆಂಗಳೂರು : ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಡಿಎನ್ಎ ಎಂಟರ್‌ಟೈನ್‌ಮೆಂಟ್ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್‌ಸಿಬಿ ಹೈಕೋರ್ಟ್‌ಗೆ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿವೆ.
ಈ ವೇಳೆ ಸರಕಾರದ ವಿರುದ್ಧ ಡಿಎನ್ಎ ಹಲವು ಆರೋಪ ಮಾಡಿದ್ದು, ಭಾರತ ಟಿ20 ವಿಶ್ವಕಪ್ ಗೆದ್ದಾಗ ವಿಕ್ಟರಿ ಪೆರೇಡ್ ನಡೆಸಲಾಗಿತ್ತು. ಡಿಎನ್‌ಎ ಆಯೋಜಿಸಿದ್ದ ಪೆರೇಡ್ ನಲ್ಲಿ 3 ಲಕ್ಷ ಜನರಿದ್ದರೂ ಅವಘಡಗಳಾಗಿರಲಿಲ್ಲ. ವಾಂಖೇಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32 ಸಾವಿರವಿದ್ದರೂ ಸಮಸ್ಯೆ ಆಗಿರಲಿಲ್ಲ. ಆರ್‌ಸಿಬಿ ವಿಕ್ಟರಿ ಪೆರೇಡ್ ನಡೆಸಲು ಅನುಮತಿಗಾಗಿ ಜೂನ್.3 ರಂದು ಪತ್ರ ಬರೆಯಲಾಗಿತ್ತು. ತೆರೆದ ಬಸ್ ಪೆರೇಡ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ರಾಜ್ಯ ಸರಕಾರ ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಿರ್ಧರಿಸಿತು. ಪೊಲೀಸರು ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ಇರಲಿಲ್ಲ ಎಂದು ಉಲ್ಲೇಖಿಸಿದೆ.
ಡಿಎನ್ಎ ನಿಂದಲೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಸರಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ .ಸಿಎಂ ಸೂಚನೆ ಮೇರೆಗೆ ಡಿಎನ್‌ಎ ನ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಮಧ್ಯಾಹ್ನ 3.30ಕ್ಕೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ಬಳಿಕ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲಾನ್ ಸರಕಾರ ಮತ್ತು ಕೆಎಸ್‌ಸಿಎ ನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರಕಾರವೇ ಕರೆ ಕೊಟ್ಟಿತ್ತು ಎಂದು ರಿಟ್ ಅರ್ಜಿಯಲ್ಲಿ ತಿಳಿಸಿದೆ.