ಬೆಂಗಳೂರು | ಯುವತಿಯ ಮಾತನಾಡಿಸಲು ಯತ್ನಿಸಿದ್ದಕ್ಕೆ ಆಕೆಯ ಸ್ನೇಹಿತರಿಂದ ಹಲ್ಲೆ: ಮೂವರ ಸೆರೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಯುವತಿಯನ್ನು ಮಾತನಾಡಿಸಲು ಯತ್ನಿಸಿದ ಯುವಕರ ಗುಂಪಿನ ಮೇಲೆ ಆಕೆಯ ಸ್ನೇಹಿತರು ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಇಲ್ಲಿನ ಕೋರಮಂಗಲ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಜೂ.7ರ ಮಧ್ಯರಾತ್ರಿ 1.30ರ ಸುಮಾರಿಗೆ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜ್ ರಸ್ತೆಯ ಸಮೀಪ ಘಟನೆ ನಡೆದಿದೆ. ಜೊತೆಗಿದ್ದ ಯುವತಿಯನ್ನು ಮಾತನಾಡಿಸಲು ಯತ್ನಿಸಿದ್ದಕ್ಕೆ, ಆಕೆಯ ಸ್ನೇಹಿತರ ಗುಂಪು ಎದುರಾಳಿ ಗುಂಪಿನೊಂದಿಗೆ ವಾಗ್ವಾದ ನಡೆಸಿದೆ. ಈ ವೇಳೆ ಎದುರಾಳಿ ಗುಂಪಿನ ಸದಸ್ಯರು ಯುವತಿಯ ಸ್ನೇಹಿತರ ಮೇಲೆ ಕಲ್ಲಿನಿಂದ ಹಲ್ಲೆಗೈದಿದ್ದು, ಎರಡೂ ಗುಂಪಿನ ಬಡಿದಾಟದ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್ನಲ್ಲಿ ಸೆರೆಯಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣೆ ಪೊಲೀಸರು ಇದೀಗ ಕೇರಳದ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ವಿವರಿಸಿದ್ದಾರೆ.
ಘಟನೆಯಲ್ಲಿ ಗಾಯಾಳುಗಳ ಪೈಕಿ ಓರ್ವ ಖಾಸಗಿ ಕಂಪೆನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಇನ್ನಿಬ್ಬರು ಥೆರಪಿಸ್ಟ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮೂವರೂ ಸ್ನೇಹಿತರಾಗಿದ್ದು, ಒಂದೇ ಫ್ಲ್ಯಾಟ್ನಲ್ಲಿ ವಾಸಿಸುತ್ತಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯ ಪಡೆದು ಪರಿಶೀಲನೆ ನಡೆಸಲಾಗುತ್ತಿದ್ದು, ಕ್ರಮ ಜರುಗಿಸಲಾವುದಾಗಿ ಎಂದು ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ.