ಗಂಗಾಧರ ಶಾಸ್ತ್ರಿ ಪ್ರತಿಷ್ಠಾನ, ಕಂದಗಲ್ ಹನುಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟ್ ರಚನೆ

ಬೆಂಗಳೂರ : ರಂಗಭೂಮಿ ಕಲೆ ಮತ್ತು ಸಾಹಿತ್ಯದ ಚಟುವಟಿಕೆಯನ್ನು ಪ್ರತ್ಸಾಹಿಸುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯಲ್ಲಿ ಗಂಗಾಧರ ಶಾಸ್ತ್ರಿ ಪ್ರತಿಷ್ಠಾನ ಹಾಗೂ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಕಂದಗಲ್ ಹನುಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟ್ ನ್ನು ರಚಿಸಿ ಸರಕಾರ ಆದೇಶಿಸಿದೆ.
ಚಿತ್ತರಗಿಯ ಗಂಗಾಧರ ಶಾಸ್ತ್ರಿ ಅವರು ಖ್ಯಾತ ರಂಗಕರ್ಮಿಗಳಾಗಿ ವೃತ್ತಿ ರಂಗಭೂಮಿಗೆ ಅಪಾರ ಕೆಲಸ ಮಾಡಿದ್ದಾರೆ. ಕಲೆಯೇ ತಮ್ಮ ಕಾಯಕ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿದ್ದರು.
ಕಂದಗಲ್ ಹನುಮಂತರಾಯ ಅವರು ಕನ್ನಡ ರಂಗಭೂಮಿ ಶೇಕ್ಸ್ ಪಿಯರ್ ಎಂದೇ ಖ್ಯಾತರಾಗಿದ್ದರು. ರಗಳೆಗಳನ್ನು ಸರಳೀಕರಿಸಿ, ರಂಗಭಾಷೆಗೆ ಬೆಸುಗೆ ಹಾಕುವ ಮೂಲಕ ರಂಗಸಾಹಿತ್ಯದ ರಸ ಋಷಿಯಾಗಿದ್ದರು. ಇವರನ್ನು ಬೆಳ್ಳಿ ಚುಕ್ಕಿ ಎಂದು ಕೂಡ ಕರೆಯಲಾಗುತ್ತಿತ್ತು. ಆದ್ದರಿಂದ ರಂಗಭೂಮಿ ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಗಂಗಾಧರ ಶಾಸ್ತ್ರಿ ಪ್ರತಿಷ್ಠಾನ, ಕಂದಗಲ್ ಹನುಮಂತರಾಯ ವೃತ್ತಿ ರಂಗಭೂಮಿ ಟ್ರಸ್ಟ್ ರಚನೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.
ಅಧ್ಯಕ್ಷ-ಸದಸ್ಯರ ನೇಮಕ: ಗಂಗಾಧರ ಶಾಸ್ತ್ರಿ ಪ್ರತಿಷ್ಠಾನಕ್ಕೆ ಶ್ರೀಗುರು ಬಿ.ಹಿರೇಮಠ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶಿವುಕುಮಾರ ಗಂಗಾಧರಶಾಸ್ತ್ರಿ ಹಿರೇಮಠ, ಅಭಯ ರಾಮ ಮನಗೂಳಿ, ಪರಸಪ್ಪ ಹನುಮಂತಪ್ಪ ಬಸಲದಿನ್ನಿ, ವಿಜಯಲಕ್ಷ್ಮಿ ಬಸವರಾಜ ಹಿರೇಮಠ, ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ, ವಿಜಯಕುಮಾರ ಶಿವಮೂರ್ತಯ್ಯ ಕಟಗಿಹಳ್ಳಿ ಮಠ, ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ ಅವರನ್ನು ಸದಸ್ಯರನ್ನಾಗಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಸರಕಾರ ಆದೇಶಿಸಿದೆ.