ಹಣಕಾಸು ಅವ್ಯವಹಾರ ಆರೋಪ : ಆರ್‌ಸಿಬಿ, ಕೆಎಸ್‍ಸಿಎ ವಿರುದ್ಧ ಈ.ಡಿ.ಗೆ ಸ್ವಾಮೀಜಿಗಳ ದೂರು

ಬೆಂಗಳೂರು : ಹಣಕಾಸು ಅವ್ಯವಹಾರ ಆರೋಪದಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಡಳಿತ ಮಂಡಳಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‍ಸಿಎ) ವಿರುದ್ಧ ತನಿಖೆ ನಡೆಸುವಂತೆ ಕೋರಿ ಜಾರಿ ನಿರ್ದೇಶನಾಲಯಕ್ಕೆ(ಈ.ಡಿ.) ಅತೀ ಹಿಂದುಳಿದ ಮಠಾಧೀಶರ ಮಹಾಸಭಾ ಸೋಮವಾರ ದೂರು ನೀಡಿದೆ.
ಆರ್‌ಸಿಬಿ ತಂಡ ತನ್ನ ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯೋದ್ಯಮವಾಗಿ ಬಳಸಿ ಕೋಟ್ಯಂತರ ರೂ. ಹಣವನ್ನು ಲೂಟಿ ಮಾಡುವ ಹುನ್ನಾರ ನಡೆಸುತ್ತಿದೆ. ಹಾಗೆಯೇ ಕೆಎಸ್‍ಸಿಎ ತನ್ನ ಸ್ಥಾನ ಮತ್ತು ಪದವಿಗಾಗಿ ಹಣ ನೀಡಿರುವುದು ಗೊತ್ತಾಗಿದೆ. ಈ ಹಣಕಾಸು ವ್ಯವಹಾರಗಳ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆಂದು ಹಣ ಸಂಗ್ರಹಿಸಿ ಬೇರೆ ಕಡೆ ಬಳಸಲಾಗಿದೆ. ಸರಕಾರ ಮತ್ತು ಬಿಸಿಸಿಐನಿಂದಲೂ ಹಣ ಪಡೆದು ತಪ್ಪು ಲೆಕ್ಕ ಕೊಡಲಾಗಿದೆ. ಸಾರ್ವಜನಿಕರಿಂದ ಪಡೆದ ಹಣಕ್ಕೆ ಸರಿಯಾದ ಲೆಕ್ಕ ಕೊಟ್ಟಿಲ್ಲ. ಈ ಎಲ್ಲ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಸಿಎಂ, ಡಿಸಿಎಂ ವಿರುದ್ಧ ದೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸುವಂತೆ ಅತೀ ಹಿಂದುಳಿದ ಮಠಾಧೀಶರ ಮಹಾಸಭಾ ದೂರು ದಾಖಲಿಸಿದೆ.