ಬೆಂಗಳೂರು | ಒಳಮೀಸಲಾತಿ ಜಾರಿಗೊಳಿಸದೆ ಭಡ್ತಿ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ಅರೆ ಬೆತ್ತಲೆ ಹೋರಾಟ

ಬೆಂಗಳೂರು : ಒಳ ಮೀಸಲಾತಿ ಜಾರಿಗೊಳಿಸದೆ ಭಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ, ಈಗಾಗಲೇ ನಡೆಸಲಾಗಿರುವ ನೇಮಕಾತಿಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನಗರದ ಫೀಡಂ ಪಾರ್ಕ್‍ನಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಅರೆ ಬೆತ್ತಲೆ ಹೋರಾಟ ನಡೆಸಲಾಯಿತು.
ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಏರ್ಪಡಿಸಿದ್ದ ಹೋರಾಟದಲ್ಲಿ ಪಾಲ್ಗೊಂಡು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ನಟ ಅಹಿಂಸಾ ಚೇತನ್ ಹಾಗೂ ಮುಖಂಡರಾದ ಬಿ.ಆರ್.ಭಾಸ್ಕರ್ ಪ್ರಸಾದ್, ಗುಡೇಮಾರನಹಳ್ಳಿ ನಾಗರಾಜ್, ಬಿ.ಆರ್.ಮುನಿರಾಜು ಸೇರಿದಂತೆ ಮಾದಿಗ ಸಮುದಾಯದ ಸಾವಿರಾರು ಜನರು ಜಮಾಯಿಸಿ, ನಮಗೆ ಅನ್ಯಾಯವಾಗುತ್ತಿದೆ. ‘ಒಳ ಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಕುರ್ಚಿ ಖಾಲಿ ಮಾಡಿ’ ಎಂದು ಸರಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ಸಮಿತಿಯ ಮುಖಂಡ ಬಿ.ಆರ್.ಭಾಸ್ಕರ್ ಪ್ರಸಾದ್, ‘ಹತ್ತಾರು ವರ್ಷಗಳಿಂದ ಒಳ ಮೀಸಲಾತಿ ಜಾರಿಗೊಳಿಸುವಂತೆ ಹೋರಾಟ ನಡೆಸಿದರೂ ಯಾವುದೇ ಸರಕಾರಗಳು ಗಮನ ಹರಿಸುತ್ತಿಲ್ಲ. ತಾವು ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಪರ ಎಂಬುದಾಗಿ ಹೇಳಿಕೊಳ್ಳಲು ಕಾಂಗ್ರೆಸ್ ಸರಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದರು.
ಒಳ ಮೀಸಲಾತಿ ಇಲ್ಲದೆ ಅಕ್ರಮ ಬಡ್ತಿ ನೇಮಕಾತಿ ಪ್ರಕ್ರಿಯೆ ನಡೆಸುವ ಮೂಲಕ ಕಾಂಗ್ರೆಸ್ ಸರಕಾರವು ಮಾದಿಗ ಸಮುದಾಯವನ್ನು ಅತ್ಯಂತ ಹೀನಾಯವಾಗಿ ವಂಚಿಸುತ್ತಿದೆ. ದಲಿತರ ಕೃಪೆಯಿಂದಲೇ ಅಧಿಕಾರಕ್ಕೆ ಬಂದಂತಹ ಈ ಸರಕಾರ ಈಗ ಸಮುದಾಯಕ್ಕೆ ದ್ರೋಹ ಬಗೆಯುತ್ತಿದೆ. ಕೂಡಲೇ ಸರಕಾರ ಬಡ್ತಿ ನೇಮಕಾತಿಗಳನ್ನು ರದ್ದುಪಡಿಸಿ, ಆದಷ್ಟು ಬೇಗ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದು ಬಿ.ಆರ್.ಭಾಸ್ಕರ್ ಪ್ರಸಾದ್ ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.