ದಿಲ್ಲಿ ಕಸ ವಿಲೇವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ : ಡಿ.ಕೆ.ಶಿವಕುಮಾರ್

ಹೊಸದಿಲ್ಲಿ : ದಿಲ್ಲಿ ಕಸ ವಿಲೇವಾರಿ ಕೇಂದ್ರ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಈ ಮಾದರಿ ಅಳವಡಿಸುವ ಬಗ್ಗೆ ಸಹೋದ್ಯೋಗಿಗಳ ಜತೆ ಚರ್ಚೆ ಮಾಡಿ ತೀರ್ಮಾನಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸೋಮವಾರ ಹೊಸದಿಲ್ಲಿಯ ಮುನಿಸಿಪಲ್ ಕಾರ್ಪೊರೇಷನ್ ನ (ಎಂಸಿಡಿ) ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇದುವರೆಗೂ ಪರಿಶೀಲನೆ ಮಾಡಿರುವ ಕಸ ವಿಲೇವಾರಿ ಕೇಂದ್ರಗಳ ಪೈಕಿ ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಅತಿ ಕಡಿಮೆ ಪ್ರದೇಶದಲ್ಲಿ ಅತ್ಯುತ್ತಮವಾಗಿ ಕಸ ವಿಲೇವಾರಿ ಕೇಂದ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಈ ಹಿಂದೆ ಪ್ರಯೋಗಿಸಿದ್ದ 10 ರಿಂದ 15 ಮೆ.ವ್ಯಾಟ್ ವಿದ್ಯುತ್ ಉತ್ಪಾದನಾ ಕೇಂದ್ರಗಳು ವಿಫಲವಾಗಿದ್ದವು. ಆದರೆ ಇಲ್ಲಿ 25 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಂತಹ ಅತ್ಯುತ್ತಮ ಕೇಂದ್ರವನ್ನು ಅಳವಡಿಸಿರುವ ಜಿಂದಾಲ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ ಅನಿಲ ಉತ್ಪಾದನೆಯನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾನು ಈ ವಿಚಾರವಾಗಿ ಬೆಂಗಳೂರಿನಲ್ಲಿ ನಮ್ಮ ಸಹೋದ್ಯೋಗಿಗಳ ಜತೆ ಚರ್ಚೆ ಮಾಡುತ್ತೇನೆ. ಇಂದು ಈ ಕೇಂದ್ರಕ್ಕೆ ಭೇಟಿ ನೀಡಿರುವುದು ನನಗೆ ಒಂದು ಕಲಿಕಾ ಅನುಭವವನ್ನು ಕೊಟ್ಟಿದೆ. ಬೆಂಗಳೂರಿನ ಹೊರ ವಲಯದಲ್ಲಿ ನಾಲ್ಕು ಕಡೆಗಳಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಿದ್ದು, ಎರಡು ಕಡೆ ಟೆಂಡರ್ ಕರೆಯಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ದಿಲ್ಲಿಯಲ್ಲಿ ಹೊಸ ತಂತ್ರಜ್ಞಾನ ಪರಿಶೀಲನೆ ಮಾಡಲಾಗಿದೆ. ಚೆನ್ನೈನಲ್ಲಿ ಅನಿಲ ಉತ್ಪಾದನೆ, ಹೈದರಾಬಾದ್ ನಲ್ಲಿ ಅನಿಲ ಹಾಗೂ ವಿದ್ಯುತ್ ಎರಡನ್ನೂ ಉತ್ಪಾದನೆ ಮಾಡಲಾಗುತ್ತಿದೆ. ದಿಲ್ಲಿಯ ಎನ್‍ಸಿಆರ್ ನಲ್ಲಿರುವ ಈ ಕೇಂದ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಕಸ ವಿಲೇವಾರಿ ಮಾಡುವ ಜಾಗದ ಅಕ್ಕಪಕ್ಕದ ಪ್ರದೇಶದವರು ಕಸ ವಿಲೇವಾರಿಯಿಂದ ದುರ್ವಾಸನೆ ಬರುತ್ತದೆ ಎಂದು ವಿರೋಧಿಸುತ್ತಾರೆ. ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಈ ಸಮಸ್ಯೆ ಎದುರಾಗುತ್ತಿದೆ. ದಿಲ್ಲಿಯಲ್ಲಿ ದುರ್ವಾಸನೆ ರಹಿತವಾಗಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ದಿಲ್ಲಿಯಲ್ಲಿನ ಮಾದರಿಯನ್ನು ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದ್ದೇವೆ. ರಸ್ತೆ ವಿಚಾರವಾಗಿ ದಿಲ್ಲಿಯಲ್ಲಿ ಪ್ರತ್ಯೇಕ ನೀತಿ ರೂಪಿಸಿದ್ದು, ಇದರ ಪರಿಶೀಲನೆ ಮಾಡಲಾಗುವುದು ಎಂದು ಅವರು ಹೇಳಿದರು.
ಹೈಕಂಮಾಡ್ ಭೇಟಿ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಬಾರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಕಷ್ಟವಾಗಲಿದೆ. ನಾಳೆ ಎತ್ತಿನಹೊಳೆ ಯೋಜನೆ ಸಂಬಂಧ ಮುಖ್ಯಮಂತ್ರಿ ಸಭೆ ಕರೆದಿದ್ದು, ನಾನು ಈ ಸಭೆಯಲ್ಲಿ ಭಾಗವಹಿಸಬೇಕಿದೆ. ಹೀಗಾಗಿ ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ ಎಂದು ತಿಳಿಸಿದರು.
ಆರ್‌ಸಿಬಿ ಆಟಗಾರರ ಸನ್ಮಾನ ಸಮಾರಂಭಕ್ಕೆ ರಾಜ್ಯಪಾಲರಿಗೆ ಆಹ್ವಾನ ಕೊಟ್ಟಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ಅವರಿಗೆ ಆಹ್ವಾನ ಕೊಟ್ಟಿದ್ದು ಯಾರು ಎಂಬುದನ್ನು ರಾಜ್ಯಪಾಲರನ್ನೇ ಕೇಳಿ. ಕಾಲ್ತುಳಿತ ಪ್ರಕರಣದ ಬಗ್ಗೆ ನ್ಯಾ.ಕುನ್ಹಾ ಅವರ ಆಯೋಗ ತನಿಖೆ ಮಾಡುತ್ತಿದ್ದು, ಅವರ ತನಿಖೆ ಮೇಲೆ ಪ್ರಭಾವ ಬೀರಬಾರದು. ಹೀಗಾಗಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.