ಇಂಜಿನಿಯರಿಂಗ್ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ

ಬೆಂಗಳೂರು : ಪ್ರಸಕ್ತ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಹೊಸ ಕೋರ್ಸುಗಳ ಪ್ರಾರಂಭ ಹಾಗೂ ಪ್ರವೇಶಾತಿ ಹೆಚ್ಚಳಕ್ಕೆ ಸರಕಾರದಿಂದ ಅನುಮೋದನೆ ಪಡೆದ ಕೋರ್ಸುಗಳನ್ನು ಒಳಗೊಂಡಂತೆ ಸಿದ್ಧಪಡಿಸಿರುವ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಶುಕ್ರವಾರ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಕರಡು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಲೋಪದೋಷವಿದ್ದಲ್ಲಿ ಅಥವಾ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು ಸರಕಾರದ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 3ನೇ ಗೇಟ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿಗೆ ಲಿಖಿತವಾಗಿ ಅಥವಾ ಇ-ಮೇಲ್ ugseatmatrix2025@gmail.com ಗೆ 7 ದಿನಗಳೊಳಗಾಗಿ ಸಲ್ಲಿಸಬಹುದು ಎಂದಿದ್ದಾರೆ.
2025-26ನೇ ಸಾಲಿಗೆ ರಾಜ್ಯದ ಸರಕಾರಿ, ಅನುದಾನಿತ, ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿನ ಇಂಜಿನಿಯರಿಂಗ್ ಸ್ನಾತಕ ಕೋರ್ಸುಗಳಿಗೆ ಎಐಸಿಟಿಇಯಿಂದ ಪ್ರವೇಶಾತಿ ಅನುಮೋದನೆಯನ್ನು ನೀಡಿರುವ ಕಾಲೇಜುಗಳನ್ನು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಸರಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯದ ಸಂಸ್ಥೆ/ಕಾಲೇಜುಗಳ ಕೋರ್ಸುಗಳನ್ನು ಕೈಬಿಡಲಾಗಿರುತ್ತದೆ. ಅಂತಹ ಕೋರ್ಸುಗಳಿಗೆ ಸರಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದುಕೊಂಡರೆ, ಕೋರ್ಸುಗಳನ್ನು ಅಂತಿಮ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲು ಕ್ರಮವಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.







