ಬೆಂಗಳೂರು | ಉದ್ಯಮಿ ಮನೆಯಲ್ಲಿ ನಗದು, ಚಿನ್ನಾಭರಣ ಕಳ್ಳತನ ಪ್ರಕರಣ: ಮಹಿಳೆಯ ಬಂಧನ
ಕೆಲಸ ಮಾಡುತ್ತಿದ್ದ ಮನೆಯಿಂದ 67 ಲಕ್ಷ ರೂ., 1 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತು ಕದ್ದೊಯ್ದಿದ್ದ ಆರೋಪಿ

ಸಾಂದರ್ಭಿಕ ಚಿತ್ರ
ಬೆಂಗಳೂರು : ಕೆಲಸ ಮಾಡುತ್ತಿದ್ದ ಮನೆಯಿಂದ 67 ಲಕ್ಷ ನಗದು, ಚಿನ್ನಾಭರಣ ಸಹಿತ 1 ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದ ಪ್ರಕರಣದಡಿ ಆರೋಪಿತೆಯನ್ನು ಇಲ್ಲಿನ ಚಾಮರಾಜಪೇಟೆ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಉಮಾ(43) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಚಾಮರಾಜಪೇಟೆಯ 3ನೇ ಮುಖ್ಯರಸ್ತೆಯ ನಿವಾಸಿಯಾಗಿರುವ ಉದ್ಯಮಿ ರಾಧಾ ಎಂಬುವವರು ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡು ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರ್ತಪೇಟೆಯಲ್ಲಿ ಸೆಕ್ಯುರಿಟಿ ಏಜೆನ್ಸಿ ಹೊಂದಿದ್ದ ರಾಧಾ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಸಹೋದರಿ ಸುಜಾತ ಅವರ ಆರೈಕೆಗೆ 3 ತಿಂಗಳ ಹಿಂದೆ ಉಮಾಳನ್ನು ಕೆಲಸಕ್ಕೆ ನೇಮಿಸಿದ್ದರು. ತಿಂಗಳಿಗೆ 23 ಸಾವಿರ ರೂ. ನೀಡುವುದಾಗಿ ಉಮಾಳಿಗೆ ಕೆಲಸ ವಹಿಸಲಾಗಿತ್ತು. 2 ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದಲ್ಲಿ ಇರುವ ತಮ್ಮ ನಿವೇಶನವನ್ನು ಮಾರಾಟ ಮಾಡಿದ್ದ ರಾಧಾ ಅವರು, ಅದರಿಂದ ದೊರೆತ ಆದಾಯವನ್ನು ಮನೆಯ ಬೀರುವಿನಲ್ಲಿಟ್ಟಿದ್ದರು.
ಫ್ಲ್ಯಾಟ್ ಖರೀದಿ ಯೋಜನೆಯಲ್ಲಿದ್ದ ರಾಧಾ ಅವರು ಜೂ.9ರಂದು ಬೀರುವಿನಲ್ಲಿದ್ದ ಹಣ ತೆಗೆಯಲು ಹೋದಾಗ ಅದರಲ್ಲಿದ್ದ ಹಣ ಮತ್ತು ಚಿನ್ನಾಭರಣಗಳು ಇಲ್ಲದಿರುವುದು ಕಂಡು ಬಂದಿತ್ತು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಜೂ.4ರಂದು ಬೆಳಗ್ಗೆ ಮನೆ ಕೆಲಸದಾಕೆ ಕೈಯಲ್ಲಿ ಬ್ಯಾಗ್ವೊಂದನ್ನು ಹಿಡಿದು ತೆರಳಿರುವುದು ಕಂಡು ಬಂದಿತ್ತು. ಆದರೆ, ಪ್ರಶ್ನಿಸಿದಾಗ ತನಗೇನೂ ಗೊತ್ತಿಲ್ಲ ಎಂದು ಉಮಾ ಉತ್ತರಿಸಿದ್ದಳು. ಕೂಡಲೇ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ರಾಧಾ ಅವರು ಉಮಾಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಚಾಮರಾಜಪೇಟೆ ಠಾಣೆ ಪೊಲೀಸರು ಉಮಾಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆಕೆ ತಾನೇ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಳು. ಆರೋಪಿ ತನ್ನ ಮಗಳ ಮನೆಯಲ್ಲಿರಿಸಿದ್ದ 50.57 ಲಕ್ಷ ನಗದು, 12.66 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.







