ರಾಜಕೀಯ ಸುದ್ದಿ ಇಲ್ಲದಿದ್ದರೆ ಪತ್ರಿಕೆಗೆ ಆಕರ್ಷಣೆ ಇರುವುದಿಲ್ಲ: ಬಸವರಾಜ ಬೊಮ್ಮಾಯಿ
ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು : ಪತ್ರಕರ್ತರು ಮತ್ತು ರಾಜಕಾರಣಿಗಳ ನಡುವೆ ಅವಿನಾಭಾವ ಸಂಬಂಧವಿದೆ. ರಾಜಕೀಯ ಸುದ್ದಿ ಇಲ್ಲದೇ ಇದ್ದರೆ ಪತ್ರಿಕೆಗೆ ಆಕರ್ಷಣೆಯೇ ಇರುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಪ್ರಭಾವಶಾಲಿ ಉದ್ಯಮ, ಪ್ರಜಾಪ್ರಭುತ್ವದಲ್ಲಿ ಜಾಗೃತವಾಗಿ ಇರುವುದು ಎಷ್ಟು ಮುಖ್ಯವೋ ಜನಪರ ಕೆಲಸ ಮಾಡುವುದು ಅಷ್ಟೇ ಮುಖ್ಯ. ಆ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.
ನಾನು ಖಾದ್ರಿ ಶಾಮಣ್ಣ ಅವರನ್ನು 1978ರಲ್ಲಿ ನೋಡಿದ್ದೆ ಆಗ ತುರ್ತುಪರಿಸ್ಥಿತಿ ಮುಗಿದಿತ್ತು. ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಸಿಡಿದೆದ್ದ ವ್ಯಕ್ತಿಯೆಂದರೆ ಖಾದ್ರಿ ಶಾಮಣ್ಣ. ಅವರು ಬಹಳ ಪ್ರಭಾವಶಾಲಿ ಆಗಿದ್ದರು. ಅವರು ಬದುಕಿದ್ದಾಗ ಮುಂದೆ ಬರುವ ಸರಕಾರಗಳು ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಿದ್ದವು. ಪತ್ರಿಕೋದ್ಯಮ ಬಹಳ ಕ್ಲಿಷ್ಟಕರ ಕೆಲಸ ಪರ ಮತ್ತು ವಿರೋಧ ಅಭಿಪ್ರಾಯಗಳು ಬಂದಾಗ ಸತ್ಯದ ಮೇಲೆ ನಿಲುವು ತೆಗೆದುಕೊಳ್ಳಬೇಕು. ಆಗ ಮಾತ್ರ ಆ ನಿಲುವಿಗೆ ಮಹತ್ವ ಬರುತ್ತದೆ ಎಂದರು.
ಖಾದ್ರಿ ಶಾಮಣ್ಣ ಅವರು ಯಾವುದೇ ವಿಷಯದಲ್ಲಿಯಾದರೂ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿದ್ದರು. ಅಂತವರ ಗರಡಿಯಲ್ಲಿ ಕೂಡ್ಲಿ ಗುರುರಾಜ್ ಬೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡ ಪ್ರಭದಲ್ಲಿ ಇವರು ಇದ್ದಾಗ ಅವರ ಲೇಖನಗಳನ್ನು ಓದಿದ್ದೆ. 1998ರಲ್ಲಿ ನಾನು ಸ್ಥಳಿಯ ಸಂಸ್ಥೆಯ ಚುನಾವಣೆಗೆ ಸ್ಪರ್ಧಿಸಿದ್ದೆ, ನಮ್ಮ ಪಕ್ಷದಲ್ಲಿ ಬಂಡಾಯ ಅಭ್ಯರ್ಥಿ ಕೂಡ ಸ್ಪರ್ಧಿಸಿದ್ದರು. ಆಗ ಎಲ್ಲ ಪತ್ರಿಕೆಯವರು 24ದಿನ ನನ್ನ ವಿರುದ್ಧ ಬರೆದಿದ್ದರು ಎಂದು ನೆನಪು ಮಾಡಿಕೊಂಡರು.
ಇದೇ ವೇಳೆ ಪತ್ರಕರ್ತ ಡಾ.ಕೂಡ್ಲಿ ಗುರುರಾಜ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ವಿಶ್ರಾಂತ ಕುಲಪತಿ ಪ್ರೊ.ಕೆ.ವಿ.ನಾಗರಾಜ, ಜಾನಪದ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ, ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ನ ಅಧ್ಯಕ್ಷ ಎಚ್.ಆರ್.ಶ್ರೀಶ ಹಾಜರಿದ್ದರು.







