ವಿಮರ್ಶೆಗೆ ಇರುವ ಪ್ರಧಾನ ಅಗತ್ಯವೆಂದರೆ, ಅದು ಚಲನೆಗೆ ಕಾರಣವಾಗಬೇಕು: ಶಿವಸುಂದರ್
ಬಹುವಚನ ಸಾಹಿತ್ಯ ವಿಮರ್ಶೆಯ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು : ವಿಮರ್ಶೆಗೆ ಇರುವ ಪ್ರಧಾನವಾದ ಅಗತ್ಯವೆಂದರೆ, ಅದು ಚಲನೆಗೆ ಕಾರಣವಾಗಬೇಕು. ವಿಮರ್ಶೆ ಮಿತಿಯನ್ನು ಗುರುತಿಸಬೇಕು. ಮಿತಿಯನ್ನು ಮೀರುವ ದಾರಿ ತೋರಿಸುವ ರೀತಿಯಲ್ಲಿ ಇರಬೇಕು ಎಂದು ಅಂಕಣಕಾರ ಶಿವಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆದ ಬಹುವಚನ ಸಾಹಿತ್ಯ ವಿಮರ್ಶೆಯ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಮರ್ಶೆಯನ್ನು ಪ್ರಶ್ನಿಸುವುದು ಎಂದು ಅರ್ಥ ಮಾಡಿಕೊಳೋಣ. ಸಾಹಿತ್ಯದಲ್ಲಿ ಬರುವ ಬದಲಾವಣೆಗಳು ಕೂಡ ಸಮಾಜದಲ್ಲಿ ಆಗುವ ಒಟ್ಟು ಬದಲಾವಣೆಯ ಭಾಗವೇ ಆಗಿರುತ್ತೆ ಎಂದು ನಾನು ಗ್ರಹಿಸಿದ್ದೇನೆ ಎಂದು ತಿಳಿಸಿದರು.
ಕನ್ನಡಿಗರು ಕೂಡ ಸುಳ್ಳು ಹೇಳುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಕನ್ನಡಿಗರು ಪರಾಕು ಸರಕುಗಳಾಗಿದ್ದಾರೆ. ಈ ಸಂದರ್ಭದಲ್ಲಿ ವಿಮರ್ಶೆಯ ಅಗತ್ಯವೇನು? ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಅಧಿಕಾರ ಎನ್ನುವುದು ಏಕರೂಪವಾಗಿರುವುದರಿಂದ ನಮ್ಮ ಚಳವಳಿ, ಬರಹ, ಸಾಹಿತ್ಯ ಕೃತಿಗಳು ಈಗಾಗಲೇ ಸ್ಥಾಪಿತವಾಗಿರುವ ಅಧಿಕಾರದ ನೆಲೆಗಳನ್ನು ಗುರುತಿಸಬೇಕು. ಬಯಲು ಮಾಡಬೇಕು. ಅದನ್ನು ಬದಲಿಸುವುದಕ್ಕೆ ಮಾರ್ಗಗಳನ್ನು ಸೂಚಿಸಬೇಕು ಎಂದು ಹೇಳಿದರು.
ಕನ್ನಡ ಭಾಷಾ ತಜ್ಞ ಕೆ.ವಿ.ನಾರಾಯಣ ಮಾತನಾಡಿ, ಕನ್ನಡ ಸಾಹಿತ್ಯ ವಿಮರ್ಶೆ ಕ್ಷೇತ್ರದಲ್ಲಿರುವ ಖಾಲಿತನವನ್ನು ಕುರಿತು ಇಂದು ಮಾತನಾಡುತ್ತಿದ್ದೇವೆ. ಬಹುವಚನ ಸಾಹಿತ್ಯ ವಿಮರ್ಶೆ ಪತ್ರಿಕೆಯನ್ನು ಪ್ರಾರಂಭಿಸಿರುವ ಉದ್ದೇಶ ಕೂಡ ಕನ್ನಡ ವಿಮರ್ಶೆಯ ಖಾಲಿತನವನ್ನು ಪೂರ್ಣಗೊಳಿಸಲು ಎಂದು ತಿಳಿಸಿದರು.
ಕನ್ನಡ ವಿಮರ್ಶೆ ಕ್ಷೇತ್ರದಲ್ಲಿ ಅನೇಕ ಆತಂಕಗಳಿವೆ. ಕನ್ನಡ ಸಾಹಿತ್ಯಕ್ಕೆ ದೀರ್ಘ ಇತಿಹಾಸವಿದ್ದರೂ, ಕನ್ನಡ ವಿಮರ್ಶೆಗೆ ದೀರ್ಘವಾದ ಇತಿಹಾಸ ಇಲ್ಲ. ಪಿ.ಲಂಕೇಶ್, ಎ.ಆರ್.ಕೃಷ್ಣಶಾಸ್ತ್ರಿ, ದ.ರಾ.ಬೇಂದ್ರೆ ಅವರದು ಸಾಹಿತ್ಯದ ಸಿದ್ಧಾಂತಗಳು ಬೇರೆ ಬೇರೆ, ಆದರೆ ವಿಮರ್ಶೆಯ ಪರಿಕರಗಳು ಬೇರೆ ಬೇರೆ ಅಲ್ಲ ಎಂದು ಹೇಳಿದರು.
ಸಾಹಿತ್ಯ ಕೃತಿಗಳ ಜವಾಬ್ಧಾರಿ ಏನು? ಅದನ್ನು ವಿಮರ್ಶೆ ಹೇಗೆ ಹೇಳ ಬೇಕೆಂದರೆ, ಪ್ರತಿಯೊಬ್ಬ ಓದುಗರಿಗೆ ಲೋಕವನ್ನು ಗ್ರಹಿಸಲು ಬೇಕಾದ ಪರ್ಯಾಯ ಪರಿಕರಗಳನ್ನು ಒದಗಿಸುವಂತೆ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕವಯಿತ್ರಿ ಮಮತಾ ಸಾಗರ, ಲೇಖಕಿ ಶ್ರೀದೇವಿ ಕಳಸದ, ಕರ್ಕಿ ಕೃಷ್ಣಮೂರ್ತಿ, ದಾದಾಪೀರ್ ಜೈಮನ್ ಮತ್ತಿತರರು ಉಪಸ್ಥಿತರಿದ್ದರು.







