ರಾಜ್ಯದ ಉರ್ದು ಶಾಲೆಗಳ ಪರಿಸ್ಥಿತಿ ಕುರಿತ ಅಧ್ಯಯನ ವರದಿಯ ಶಿಫಾರಸು ಅನುಷ್ಠಾನಗೊಳಿಸಲು ಸಿಎಂಗೆ ಮನವಿ : ಉಬೇದುಲ್ಲಾ ಶರೀಫ್

ಬೆಂಗಳೂರು : ರಾಜ್ಯದಲ್ಲಿನ ಸರಕಾರಿ ಉರ್ದು ಶಾಲೆಗಳ ಪರಿಸ್ಥಿತಿ ಕುರಿತು ನಿವೃತ್ತ ಐಎಎಸ್ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ಸಲ್ಲಿಸಿರುವ ವರದಿಯಲ್ಲಿನ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಂಜುಮನ್ ತರಖ್ಖಿ ಉರ್ದು(ಹಿಂದ್) ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದ್ದಾರೆ.
ಶನಿವಾರ ಶಿವಾಜಿನಗರದ ಅಲ್ ಅಮೀನ್ ಶಾಲೆಯ ಡಾ.ಮುಮ್ತಾಝ್ ಅಹ್ಮದ್ ಖಾನ್ ಸ್ಮಾರಕ ಸಭಾಂಗಣದಲ್ಲಿ ನಡೆದ ರಾಜ್ಯದ ಉರ್ದು ಶಾಲೆಗಳ ಅಧ್ಯಯನ ವರದಿ ಕುರಿತ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಜುಮನ್ ತರಖ್ಖಿ ಉರ್ದು(ಹಿಂದ್) ಕರ್ನಾಟಕದ ವತಿಯಿಂದ ರಾಜ್ಯದ ಉರ್ದು ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ, ಉರ್ದು ಶಾಲೆಗಳ ಅಭಿವೃದ್ಧಿಗಾಗಿ ಸೂಕ್ತ ಶಿಫಾರಸುಗಳನ್ನು ಮಾಡಲು ನಿವೃತ್ತ ಐಎಎಸ್ ಅಧಿಕಾರಿಗಳಿಂದ ಕೂಡಿದ ಐವರು ಸದಸ್ಯರ ಅಧ್ಯಯನ ತಂಡವನ್ನು ರಚಿಸಲಾಗಿತ್ತು. ಈ ತಂಡವು ಸಲ್ಲಿಸಿದ 402 ಪುಟಗಳ ವಿಶ್ಲೇಷಣಾತ್ಮಕ ಅಧ್ಯಯನ ವರದಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ದಿವಂಗತ ಎಂ.ಎ.ಖಾಲಿದ್ ಸೇರಿದಂತೆ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಝೀಝುಲ್ಲಾ ಬೇಗ್, ಮಿರ್ಝಾ ಅಕ್ಬರ್ ಉಲ್ಲಾ, ಸಲಾಹುದ್ದೀನ್, ಸಲೀಮ್ ತಂಡದ ಸದಸ್ಯರಾಗಿದ್ದರು. ಈ ಅಧ್ಯಯನ ತಂಡವು ತಮ್ಮ ಖರ್ಚಿನಲ್ಲಿ ರಾಜ್ಯದ ಉರ್ದು ಶಾಲೆಗಳ ಪರಿಶೀಲನೆ ನಡೆಸಿ ಈ ಮಹತ್ವದ ವರದಿಯನ್ನು ಸಿದ್ಧಪಡಿಸಿದೆ. ಇದಕ್ಕೂ ಮುಂಚೆ ಇಂತಹ ಸಮಗ್ರ ಅಧ್ಯಯನ ನಡೆದ ಉದಾಹರಣೆ ನಮ್ಮ ಮುಂದಿಲ್ಲ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.
ಅಧ್ಯಯನ ತಂಡದ ಅಧ್ಯಕ್ಷ ಅಝೀಝುಲ್ಲಾ ಬೇಗ್ ಮಾತನಾಡಿ, ಅಧ್ಯಯನ ವರದಿ ಹೊರಬಂದ ತಕ್ಷಣ ಉರ್ದು ಶಾಲೆಗಳ ಪರಿಸ್ಥಿತಿ ಸುಧಾರಣೆಯಾಗುತ್ತದೆ ಎಂಬ ನಿರೀಕ್ಷೆ ಇಲ್ಲ. ರಾಜ್ಯ ಸರಕಾರದ ಗಮನವನ್ನು ಸೆಳೆಯುವುದು ಅಂಜುಮನ್ ತರಖ್ಖಿ ಉರ್ದು ಸಂಘಟನೆಯ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಂಜುಮನ್ ತರಖ್ಖಿ ಉರ್ದು(ಹಿಂದ್) ಕರ್ನಾಟಕದ ಪದಾಧಿಕಾರಿಗಳಾದ ಇಜಾಝ್ ಅಹ್ಮದ್ ಜೋಹರಿ, ಸೈಯದ್ ಶಫೀಉಲ್ಲಾ, ಮುಬೀನ್ ಮುನವ್ವರ್, ಶಫೀಕ್ ಆಬಿದಿ, ಶಾಯಿಸ್ತಾ ಯೂಸುಫ್ ಹಾಗೂ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಮುಖ ಶಿಫಾರಸುಗಳು :
ಉರ್ದು ಶಾಲೆಗಳ 7ನೆ ಮತ್ತು 10ನೆ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ತರಗತಿಗಳನ್ನು ಆರಂಭಿಸುವುದು. ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೆಚ್ಚಿಸುವುದು. ಖಾಲಿ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡುವುದು. ಪ್ರಾಥಮಿಕ ಶಾಲೆಗಳನ್ನೆ ಪ್ರೌಢಶಾಲಾ ಮಟ್ಟಕ್ಕೆ ವಿಸ್ತರಿಸುವುದು, ಡ್ರಾಪ್ ಔಟ್ ತಡೆಯುವುದು. ಶಾಲೆಗಳ ಅಭಿವೃದ್ಧಿಗೆ ವಾರ್ಷಿಕ ಬಜೆಟ್‌ನ ಕನಿಷ್ಠ ಶೇ.15ರಷ್ಟು ವಿನಿಯೋಗಿಸುವುದು. ಉರ್ದು ಭಾಷಾ ಲ್ಯಾಬ್‌ಗಳನ್ನು ಆಯ್ದ ಜಿಲ್ಲೆಗಳಲ್ಲಿ ಸ್ಥಾಪಿಸುವುದು. ಹಾಗೂ ಉರ್ದು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸ್ವತಂತ್ರ ಸಮಿತಿ ರಚಿಸುವುದು.







